ಕನ್ನಡ, ಭಾಷೆಯಷ್ಟೇ ಎಂದು ಭಾವಿಸುವುದು ಹೆಡ್ಡತನ

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ

ದಾವಣಗೆರೆ, ಅ. 31 – ಇಂಗ್ಲಿಷ್ ಮಾಧ್ಯಮದ ವ್ಯಾಮೋಹದಿಂದಾಗಿ ಕನ್ನಡ ಕನಿಷ್ಠ ಎಂಬ ಭಾವನೆ ಬೆಳೆಯುತ್ತಿದೆ, ಕನ್ನಡದ ಮಕ್ಕಳು ತಮ್ಮನ್ನು ತಾವು ತಿರಸ್ಕಾರದಿಂದ ನೋಡುತ್ತಿದ್ದಾರೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ವಿಷಾದಿಸಿದ್ದಾರೆ.

ನಗರದ ಕಲಾಕುಂಚ ಹಾಗೂ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕನ್ನಡ ಕುವರ – ಕುವರಿ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕನ್ನಡ ಭಾಷೆಯಷ್ಟೇ ಎಂದು ಭಾವಿಸುವುದು ಹೆಡ್ಡತನ. ಕನ್ನಡ ಸಂಸ್ಕೃತಿ ಬಿಂಬಿಸುತ್ತದೆ, ತನ್ನದೇ ಆದ ಇತಿಹಾಸ ಹಾಗೂ ಪರಂಪರೆ ಹೊಂದಿದೆ. ಅದು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುತ್ತದೆ ಎಂದವರು ಹೇಳಿದರು.

ಹೀಗಾಗಿ ಕನ್ನಡ ಬಿಟ್ಟು ಬೇರೆ ಮಾಧ್ಯಮದ ಕಡೆ ಹೋದರೆ, ಸಂಸ್ಕೃತಿಯ ಕೊಂಡಿಗಳು ಕಳಚುತ್ತಾ ಹೋಗುತ್ತವೆ ಎಂದ ಅವರು, ಕನ್ನಡ ಮಾಧ್ಯಮದ ಮಕ್ಕಳಲ್ಲಿ ಈ ನಾಡಿನ ಸಂಸ್ಕೃತಿ ಹಾಗೂ ಭಾರತೀಯತೆ ಕಾಣುತ್ತದೆ ಎಂದು ಪ್ರತಿಪಾದಿಸಿದರು.

ಚೂರು ಪಾರು ತಿಂಡಿಗಾಗಿ ಬೆಳೆಸಿದವರನ್ನು ಬಿಟ್ಟು ಪಕ್ಕದ ಮನೆಗೆ ಹೋಗುವ ಶ್ವಾನದ ರೀತಿಯಲ್ಲಿ, ನಾವೂ ಹೊಟ್ಟೆಪಾಡಿಗೆ ಸಿಗುವ ಲಾಭಕ್ಕಾಗಿ ಅನ್ನ, ಜೀವ ನೀಡುವ ಹಾಗೂ ಸಾಕಿ ಸಲಹುವ ಕನ್ನಡ ಮಾತೆಯನ್ನು ಬಿಟ್ಟು ಬೇರೆಡೆ ಹೋಗುತ್ತಿದ್ದೇವೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸನ್ಮಾನಿತರಾಗಿ ಮಾತನಾಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಿತರಾಗಿರುವ ಡಾ. ಎಂ.ಜಿ. ಈಶ್ವರಪ್ಪ, ಕನ್ನಡ ಉದ್ಯೋಗದ – ಅನ್ನದ ಭಾಷೆಯಾಗಿ ಮಾಡಲು ಸಾಧ್ಯವಾದರೆ ಮಾತ್ರ ಕನ್ನಡ ಉಳಿಯಲು ಸಾಧ್ಯ. ಇದು ಸರ್ಕಾರದಿಂದ ಹಿಡಿದು ಶಿಕ್ಷಕರು, ವಿದ್ಯಾರ್ಥಿಗಳನ್ನು ಒಳಗೊಂಡು ಎಲ್ಲರೂ ಮಾಡಬೇಕಾದ ಕೆಲಸ ಎಂದರು.

ಕನ್ನಡ ಭಾಷೆಯಿಂದ ಮಾತ್ರ ವಿದ್ಯಾರ್ಥಿಗಳ ಹೃದಯ ವಿಕಾಸ ಮಾಡಲು ಸಾಧ್ಯ. ವಿಜ್ಞಾನ, ಸಮಾಜ ವಿಜ್ಞಾನ ಮತ್ತಿತರೆ ವಿಷಯಗಳಿಂದ ಕೇವಲ ಬೌದ್ಧಿಕ ವಿಕಾಸ ಮಾತ್ರ ಸಾಧ್ಯ ಎಂದವರು ವಿಶ್ಲೇಷಿಸಿದರು.

ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಬಿ. ವಾಮದೇವಪ್ಪ, ಹಿರಿಯ ಪತ್ರಕರ್ತ ಹಳೇಬೀಡು ರಾಮಪ್ರಸಾದ್, ಸಿದ್ದಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೋಜ, ಕಲಾಕುಂಚದ ಅಧ್ಯಕ್ಷ ಕೆ.ಹೆಚ್. ಮಂಜುನಾಥ್ ಉಪಸ್ಥಿತರಿದ್ದರು.

ಬೇಳೂರು ಸಂತೋಷ ಕುಮಾರ ಶೆಟ್ಟಿ ಸ್ವಾಗತಿಸಿದರೆ. ಕಲಾಕುಂಚ ಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ನಿರೂಪಿಸಿದರು.

error: Content is protected !!