ಎಲ್ಲ ಮಕ್ಕಳಲ್ಲೂ ವಿಶೇಷತೆ ಇರುತ್ತದೆ : ದೀಪಾ ಜಗದೀಶ್‌

ಬೌದ್ಧಿಕ ಅಂಗವೈಕಲ್ಯತೆ ಹೊಂದಿರುವವರಿಗೆ ಲರ್ನಿಂಗ್ ಮೆಟೀರಿಯಲ್ಸ್ ಕಿಟ್‌ ವಿತರಣೆ

ದಾವಣಗೆರೆ,  ಜು.25- ಎಲ್ಲಾ ಮಕ್ಕಳಲ್ಲೂ ಒಂದೊಂದು ರೀತಿಯ ವಿಶೇಷತೆ ಇರುತ್ತದೆ. ಪೋಷಕರು ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿಶೇಷ ಮಕ್ಕಳಿಗೆಂದೇ ಸರ್ಕಾರ ಒದಗಿಸಿರುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ದೀಪಾ ಜಗದೀಶ್ ಕರೆ ನೀಡಿದರು. 

ನಗರದ ಕಾಂಪೋಸಿಟ್ ರೀಜನಲ್ ಸೆಂಟರ್‍ನಲ್ಲಿ (ಸಿಆರ್‍ಸಿ) ಮೊನ್ನೆ ಏರ್ಪಡಿಸಲಾಗಿದ್ದ ಅಡಿಪ್ಸ್ ಯೋಜನೆಯಡಿ ಬೌದ್ಧಿಕ ಅಂಗವೈಕಲ್ಯತೆ ಹೊಂದಿರುವವರಿಗೆ ಟೀಚಿಂಗ್ ಲರ್ನಿಂಗ್ ಮೆಟೀರಿಯಲ್ಸ್  ಕಿಟ್ (ಟಿಎಲ್‍ಎಂ) ವಿತರಿಸಿ ಅವರು  ಮಾತನಾಡಿದರು. 

ಬೌದ್ಧಿಕ ಸಮಸ್ಯೆಗಳಿರುವ, ಅಂಗವೈಕಲ್ಯತೆ ಇರುವ ಎಲ್ಲಾ ಮಕ್ಕಳಿಗೆ ಈ ಸೌಲಭ್ಯಗಳು ದೊರೆಯಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಹಕಾರ ಮತ್ತು ಸಹಯೋಗದಿಂದ ಕೆಲಸ ಮಾಡಿದಲ್ಲಿ ಎಲ್ಲ ಯೋಜನೆಗಳು ಪರಿಣಾಮಕಾರಿಯಾಗಿ ಅರ್ಹರಿಗೆ ತಲುಪಲಿವೆ ಎಂದು ಹೇಳಿದರು.

ಸಿಆರ್‍ಸಿ ನಿರ್ದೇಶಕ ಡಾ.ಜ್ಞಾನವೇಲ್ ಮಾತನಾಡಿ, ಈ ಕೇಂದ್ರದಲ್ಲಿ ಬೌದ್ದಿಕ ಅಂಗವೈಕಲ್ಯ ಮತ್ತು ಇತರೆ ವಿಕಲಚೇತನ ಮಕ್ಕಳೊಂದಿಗೆ ಸಹನೆ, ಪ್ರೀತಿ – ವಿಶ್ವಾಸದಿಂದ ಮನವೊಲಿಸಿ ತರಬೇತಿ, ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದರು.

1825 ಹೊಸಬರಿಗೆ ಮತ್ತು 112016 ಫಾಲೋ ಅಪ್ ಪ್ರಕರಣಗಳಲ್ಲಿ ಪುನರ್ವಸತಿ ಸೇವೆ ನೀಡಲಾಗಿದೆ. ಅಡಿಪ್ ಯೋಜನೆಯಡಿ ಇದುವರೆಗೆ 492 ಟಿಎಲ್‍ಎಂ ಕಿಟ್ ವಿತರಣೆ ಮಾಡಲಾಗಿದೆ. 464 ಹಿಯರಿಂಗ್ ಏಡ್‍ಗಳನ್ನು ನೀಡಲಾಗಿದೆ. ಈ ಬಾರಿ ಒಟ್ಟು 87 ಬೌದ್ದಿಕ ಅಂಗವೈಕಲ್ಯತೆ ಹೊಂದಿರುವ ಮಕ್ಕಳಿಗೆ ಟೀಚಿಂಗ್ ಲರ್ನಿಂಗ್ ಮೆಟೀರಿಯಲ್‍ಗಳನ್ನು ನೀಡುವ ಗುರಿ ಹೊಂದಲಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಮೊದಲನೇ ಹಂತದಲ್ಲಿ 7 ಜನರಿಗೆ ಟಿಎಲ್‍ಎಂ ವಿತರಣೆ ಮಾಡುವರು. ಉಳಿದ 80 ಟಿಎಲ್‍ಎಂಗಳನ್ನು ನಂತರದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ದಿನಕ್ಕೆ 5 ರಿಂದ 10 ಕಿಟ್‍ಗಳನ್ನು ವಿತರಣೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಿಆರ್‍ಸಿ ರಿಹ್ಯಾಬಿಲಿಟೇಷನ್ ಅಧಿಕಾರಿ ಕನಗಸಭಾಪತಿ ನಿರೂಪಿಸಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಶಿಧರ್ ಜಿ.ಎಸ್, ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಶೇಕ್ ಯಾಸಿನ್ ಷರೀಫ್, ರಾಜು ತಲಾಥೋಟಿ, ಆಡಳಿತಾಧಿಕಾರಿ ಪಂಕಜ್ ಸಿನ್ಹಾ ಮತ್ತಿತರರು  ಹಾಜರಿದ್ದರು.

error: Content is protected !!