ಮಲೇಬೆನ್ನೂರಿನ ಟಾಸ್ಕ್ಪೋರ್ಸ್ ಸಭೆಯಲ್ಲಿ ಕೋವಿಡ್ ಮಾರ್ಗದರ್ಶಿ ಪ್ರಸನ್ನ ಮನವಿ
ಮಲೇಬೆನ್ನೂರು ಜು, 23 – ಕೊರೊನಾ ವೈರಸ್ ನಿಯಂತ್ರಣಕ್ಕೆ ಜನರು ಸಹಕರಿಸಿ ಎಂದು ಕೋವಿಡ್ ಮಾರ್ಗದರ್ಶಿ ಅಧಿಕಾರಿ ಹಾಗೂ ನಗರಾಭಿವೃಧ್ಧಿ ಕೋಶದ ಎಇಇ ಪ್ರಸನ್ನ ಮನವಿ ಮಾಡಿದರು.
ಪಟ್ಟಣದ ಕಲ್ಲೇಶ್ವರ ದೇವಾಲಯದ ಆವರಣದಲ್ಲಿ ಕೋವಿಡ್ ಜಾಗೃತಿ ಕುರಿತು ಹಮ್ಮಿಕೊಂಡಿದ್ದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೈ ಕಾಲು ಸೋಪು ಹಚ್ಚಿ ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿ ಸಭೆ ಸಮಾರಂಭಗಳಲ್ಲಿ ಭಾಗವಹಿಸಬೇಡಿ, ಅನಗತ್ಯ ಸಂಚಾರ ಬೇಡ ಎಂದರು.
ಪುರಸಭೆ ಅಧಿಕಾರಿ ದಿನಕರ್ ಮಾತನಾಡಿ ಕೊರೊನಾ ನಿಯಂತ್ರಣಕ್ಕೆ ಪುರಸಭೆ. ಕಂದಾಯ, ಆರೋಗ್ಯ ಇಲಾಖೆಗಳು ಶ್ರಮಿಸುತ್ತಿವೆ ಎಂದರು.
ಪರಿಸರ ಎಂಜಿನಿಯರ್ ಉಮೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿ ಕೊರೊನಾ ಸೋಂಕಿಗೆ ಉತ್ತಮ ಚಿಕಿತ್ಸೆ ಲಭ್ಯವಿದ್ದು, ಭಯ ಬೇಡ ಪ್ರಾಣಾಪಾಯದಿಂದ ಪಾರಾಗಬಹುದು ಎಂದರು.
ಬಡಾವಣೆ ಮುಖಂಡ ಕೆ.ಜಿ. ಲೋಕೇಶ್, ಪುರಸಭೆ ಹಿರಿಯ ಸದಸ್ಯ ಮಾಸಣಗಿ ಶೇಖರಪ್ಪ, ಪುರಸಭೆ ಸದಸ್ಯೆ ಶ್ರೀಮತಿ ಪಾನಿಪುರಿ ರಂಗನಾಥ್ ಮಾತನಾಡಿ ಜ್ವರ, ಶೀತ, ಕೆಮ್ಮು, ಉಸಿರಾಟದ ಸಮಸ್ಯೆ ಕಂಡುಬಂದರೆ ತಕ್ಷಣ ಆರೋಗ್ಯ ಕೇಂದ್ರಕ್ಕೆ ಹೋಗಿ ಎಂದರು.
ಕೊರೊನಾ ನಿಯಂತ್ರಣಕ್ಕೆ ಮನೆಮದ್ದು ಕಷಾಯ, ಬಿಸಿಯೂಟ, ಬಿಸಿ ನೀರು ಕುಡಿಯುವುದು ಉತ್ತಮ. ಮಧುಮೇಹ, ಅಧಿಕ ರಕ್ತದೊತ್ತಡ ಇದ್ದರೆ ಚಿಕಿತ್ಸೆ ಪಡೆಯಲೇಬೇಕು, ಪರಸ್ಥಳಗಳಿಂದ ಬಂದವರ ಮಾಹಿತಿ ನೀಡಿ ಎಂದು ಪತ್ರಕರ್ತ ಎಂ. ನಟರಾಜನ್ ಮನವಿ ಮಾಡಿದರು.
ಅಂಗನವಾಡಿ ಕಾರ್ಯಕರ್ತರು, ಬೂತ್ ಮಟ್ಟದ ಅಧಿಕಾರಿಗಳು ಸರ್ವೇ ಕೆಲಸದ ವೇಳೆ ಮಾಸ್ಕ್, ಸ್ಯಾನಿಟೈಸರ್, ರಕ್ಷಣಾ ಪರಿಕರ ನೀಡುವಂತೆ ಮನವಿ ಸಲ್ಲಿಸಿದರು.
ಪುರಸಭೆ ಅಧೀಕ್ಷಕ ಗಣೇಶ್, ಕಂದಾಯಾಧಿಕಾರಿ ಪ್ರಭು, ಆರೋಗ್ಯ ನಿರೀಕ್ಷಕ ಗುರುಪ್ರಸಾದ್ , ನವೀನ್, ವೆಂಕಟೇಶ್, ಗ್ರಾ.ಪಂ ಮಾಜಿ ಅಧ್ಯಕ್ಷ ಭೋವಿ ಕುಮಾರ್ ,ಪಾನಿಪುರಿ ರಂಗನಾಥ್, ಅಂಗನವಾಡಿ ಕಾರ್ಯಕರ್ತರು ಈ ವೇಳೆ ಇದ್ದರು.