ಮಲೇಬೆನ್ನೂರಿನ ಕಾರ್ಯಕ್ರಮದಲ್ಲಿ ಟಿಹೆಚ್‌ಒ ಡಾ. ಚಂದ್ರಮೋಹನ್
ಮಲೇಬೆನ್ನೂರು, ಜು.25- ಕಳೆದ 23 ರಿಂದ ರಾಪಿಡ್ ಆಂಟಿಜಿನ್ ಟೆಸ್ಟ್ ಪ್ರಾರಂಭವಾಗಿದ್ದು, ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳ ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಈ ಟೆಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಟಿಹೆಚ್ಒ ಡಾ. ಚಂದ್ರಮೋಹನ್ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಕರೆದಿದ್ದ ಬಿಎಲ್‌ಓಗಳ ತುರ್ತು ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಪಿಡ್ ಪರೀಕ್ಷೆಯಿಂದಾಗಿ ಅರ್ಧ ಗಂಟೆಯಲ್ಲಿ ವರದಿ ಕೈಸೇರಲಿದೆ. ದಿನಾಂಕ 23 ರಂದು ಹರಿಹರದಲ್ಲಿ 21 ಟೆಸ್ಟ್ ಮಾಡಿದ್ದು, ಅದರಲ್ಲಿ 10 ಜನರಿಗೆ ಪಾಸಿಟಿವ್ ಬಂದಿದೆ. ಶುಕ್ರವಾರ 36 ಟೆಸ್ಟ್‌ನಲ್ಲಿ ಐವರಿಗೆ ಸೋಂಕು ದೃಢಪಟ್ಟಿದೆ. ಈ ಟೆಸ್ಟ್‌ನಿಂದಾಗಿ ಗ್ರಾಮೀಣ ಜನರಿಗೆ ಬಹಳ ಅನುಕೂಲವಾಗಿದೆ. ಈಗಾಗಲೇ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ಟೆಸ್ಟ್ ಕಿಟ್ ಕೊಟ್ಟಿ ದ್ದೇವೆ ಎಂದು ಚಂದ್ರಮೋಹನ್ ಹೇಳಿದರು.
ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಮಾತನಾಡಿ, ಕೊರೊನಾ ಪಾಸಿಟಿವ್ ಕೇಸ್‌ಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡುವ ಕೆಲಸ ವಿಳಂಬವಾಗುತ್ತಿದೆ. ಆದ್ದರಿಂದ ಶಿಕ್ಷಕರು ಈ ಕೆಲಸದ ಜವಾಬ್ದಾರಿ ವಹಿಸಿಕೊಳ್ಳಬೇಕು. ನಿಮ್ಮ ಜೊತೆ ಪುರಸಭೆ ಸಿಬ್ಬಂದಿ ಇರುತ್ತಾರೆ ಎಂದರು.
ಕೊರೊನಾ ನಿಯಂತ್ರಣ ಬರುವವರೆಗೂ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದು ಮನವಿ ಮಾಡಿದ ತಹಶೀಲ್ದಾರ್ ರಾಮಚಂದ್ರಪ್ಪ ಅವರು, ಕಂಟೈನ್‌ಮೆಂಟ್ ಝೋನ್‌ಗಳ ಸರ್ವೇ ತಂಡ ರಚಿಸುವಂತೆ ಸಭೆಯಲ್ಲಿದ್ದ ಪುರಸಭೆ ಸಿಓ ಧರಣೇಂದ್ರಕುಮಾರ್ ಅವರಿಗೆ ಸೂಚಿಸಿದರು.
ಬಿಎಲ್‌ಓಗಳಿಗೆ ಹರಿಹರ ತಾಲ್ಲೂಕಿನಲ್ಲಿ ಇದುವರೆಗೂ ಚುನಾವಣಾ ಪ್ರಮಾಣ ಪತ್ರ ನೀಡಿಲ್ಲ ಎಂದು ಬೀರಲಿಂಗೇಶ್ವರ ಶಾಲೆಯ ಮುಖ್ಯ ಶಿಕ್ಷಕ ಕರಿಬಸಪ್ಪ ಅವರು ತಹಶೀಲ್ದಾರ್ ಗಮನಕ್ಕೆ ತಂದರು.
ಉಪ ತಹಶೀಲ್ದಾರ್ ಆರ್.ರವಿ, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ಆರೋಗ್ಯಾಧಿಕಾರಿ ಗುರುಪ್ರಸಾದ್, ನವೀನ್, ಸಿಆರ್‌ಪಿಗಳಾದ ಬಸವರಾಜಯ್ಯ, ಎ.ಕೆ.ರಾಜಪ್ಪ, ಪುರಸಭೆ ಸದಸ್ಯ ಎ.ಆರೀಫ್ ಅಲಿ, ಡಾ. ನಿಸಾರ್, ಶಿಕ್ಷಕಿ ಪ್ರೇಮ ಲೀಲಾಬಾಯಿ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಪಿ.ಹಾಲೇಶ್ ಮತ್ತಿತರರು ಸಭೆಯಲ್ಲಿದ್ದರು.