ವಚನಗಳೇ ಒಂದು ವಿಶ್ವವಿದ್ಯಾಲಯ : ಮುರುಘಾ ಶರಣರು

ಚಿತ್ರದುರ್ಗ, ಅ.23- ಮುಸಲ್ಮಾನರಿಗೆ ಕುರಾನ್, ಕ್ರೈಸ್ತರಿಗೆ ಬೈಬಲ್, ಹಿಂದೂ ಧರ್ಮದವರು ರಾಮಾಯಣ, ಮಹಾಭಾರತ, ಭಗವದ್ಗೀತೆ ಪ್ರೀತಿಸಿದರೆ ಬಸವ ಧರ್ಮೀಯರು ವಚನಗಳನ್ನು ಪ್ರೀತಿಸಬೇಕು, ವಚನಗಳನ್ನು ಅಧ್ಯಯನ ಮಾಡಬೇಕು. ಅವರವರ ಧರ್ಮ ಅವರಿಗೆ ಶ್ರೇಷ್ಠವಾದುದು. ಸಾಧ್ಯವಾದರೆ ನಮ್ಮ ಧರ್ಮವನ್ನು ಅಧ್ಯಯನ ಮಾಡೋಣ, ಪರ ಧರ್ಮವನ್ನೂ ಅಧ್ಯಯನ ಮಾಡೋಣ, ಎಲ್ಲಾ ಧರ್ಮಗಳನ್ನು ಗೌರವಿಸೋಣ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.

ನಗರದ ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆಯುತ್ತಿರುವ ತಾವಿದ್ದಲ್ಲಿಯೇ ಶರಣ ಸಂಸ್ಕೃತಿ ಉತ್ಸವದಲ್ಲಿ ಶುಕ್ರವಾರ ನಡೆದ ರಕ್ತದಾನ ಹಾಗೂ ಪ್ಲಾಸ್ಮಾ ದಾನ, ವಚನ ಕಮ್ಮಟ ಪರೀಕ್ಷೆಯ
ರಾಂಕ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳಿಗೆ, ಯುವಜನರಿಗೆ ವಚನಗಳ ಸಂದೇಶ ತಲುಪಿಸಬೇಕು, ಇಲ್ಲದಿದ್ದರೆ ಅವರಲ್ಲಿ ಸಂದೇಹಗಳೇ ತುಂಬಿಕೊಳ್ಳುತ್ತವೆ. ಕಾವ್ಯ ವಾಚನ, ಕಥಾ ವಾಚನಗಳು ನಮಗೆ ಮೌಲ್ಯ ಹಾಗೂ ನೈತಿಕತೆ ಕಲಿಸುತ್ತವೆ. ನೈತಿಕತೆ ಕಟ್ಟಿಕೊಡಲು ಪವಿತ್ರ ಗ್ರಂಥಗಳು ಇವೆ. ಉತ್ತರ ಕರ್ನಾಟಕದಲ್ಲಿ ವಚನ ವಾಚನಗಳಿದ್ದರೆ, ಆ ಭಾಗದಲ್ಲಿ ಪುರಾಣ ವಾಚನವಿದೆ. ಆ ಮೂಲಕ ಜನರಲ್ಲಿ ಧಾರ್ಮಿಕ ಭಾವನೆ ಮೂಡಿದೆ. ಕಥಾ ವಾಚನ, ಕಾವ್ಯ ವಾಚನಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ ಎಂದರು. 

ವಚನಗಳೇ ಒಂದು ವಿಶ್ವವಿದ್ಯಾಲಯ, ವಚನಗಳಿಂದ ಹರ್ಡೇಕರ್ ಮಂಜಪ್ಪ, ಬಾಲ್ಕಿ ಶ್ರೀಗಳು, ಗದಗ ಶ್ರೀಗಳು, ಇಳಕಲ್ ಶ್ರೀಗಳು, ಉತ್ತಂಗಿ ಚನ್ನಪ್ಪ, ಶಿಶಿ ಬಸವನಾಳ, ಫ.ಗು. ಹಳಕಟ್ಟಿ, ಮುರುಘೇಂದ್ರ ಶಿವಯೋಗಿಗಳು, ಸಿದ್ಧಗಂಗಾ ಶ್ರೀಗಳು, ಸಿರಿಗೆರೆಯ ಶಿವಕುಮಾರ ಶ್ರೀಗಳು, ಲಿಂಗಾನಂದ ಶ್ರೀಗಳು, ಮುರುಘಾ ಶರಣರು ಇಂತಹ ವ್ಯಕ್ತಿಗಳನ್ನು ಸೃಷ್ಟಿಸಿದೆ.

ಭಾರತೀಯರಿಗೆ ಇತಿಹಾಸದ ಪ್ರಜ್ಞೆ ಸ್ವಲ್ಪ ಕಡಿಮೆ. ಇಂದಿನ ಮಕ್ಕಳಿಗೆ, ಯುವಜನರಿಗೆ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯೇ ತಿಳಿದಿಲ್ಲ, ಅರ್ಥವಾಗಿಲ್ಲ. ಹಾಗಿದ್ದ ಮೇಲೆ ಬಸವಣ್ಣ, ಬುದ್ಧ, ಮಹಾವೀರರು ಎಷ್ಟು ಜನರಿಗೆ ಅರ್ಥವಾಗಬೇಕು. ನಮ್ಮ ಪೂರ್ವಿಕರ ಅರಿವು ಇಲ್ಲದ ದಯನೀಯ ಹಾಗೂ ಶೋಚನೀಯ ಸ್ಥಿತಿಯಲ್ಲಿದ್ದೇವೆ ಎಂದರು.

ನಾನು 50-60 ದೇಶಗಳಿಗೆ ಹೋಗಿದ್ದೇನೆ. ಅಲ್ಲಿ ಎಲ್ಲಿಂದ ಬಂದೆ ಎಂದು ಕೇಳಿದಾಗ ಭಾರತದಿಂದ ಎಂದರೆ, ಗಾಂಧೀಜಿ ನಾಡಿನಿಂದ ಎಂಬ ಉದ್ಘಾರ ತೆಗೆಯುತ್ತಾರೆ. ಜಗತ್ತು ಗಾಂಧೀಜಿಯ ಮೌಲ್ಯ ಹಾಗೂ ವಿಚಾರಧಾರೆಗಳನ್ನು ಗೌರವಿಸುತ್ತಿದೆ ಹಾಗೂ ಆರಾಧಿಸುತ್ತಿದೆ. ಭಾರತೀಯರಾದ ನಾವು ಗಾಂಧಿ ತತ್ವವನ್ನು ತಿಳಿಯುವುದಕ್ಕಿಂತ ವಿದೇಶಿಯರು ಹೆಚ್ಚು ತಿಳಿಯುತ್ತಿದ್ದಾರೆ ಎಂದರು.

ಟಿ.ನರಸೀಪುರದ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಅಂಬಿಗರ ಚೌಡಯ್ಯ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ವಚನ ಓದುವ ಹವ್ಯಾಸ ಬೆಳೆಸಬೇಕು ಎಂದರು.

ತುಮಕೂರಿನ ಡಿ.ಕಲ್ಕೇರಿಯ ಶ್ರೀ ತಿಪ್ಪೇರುದ್ರ ಸ್ವಾಮೀಜಿ ಮಾತನಾಡಿ,  ಮನುಷ್ಯನಿಗೆ ಉಸಿರಿನಷ್ಟೇ ರಕ್ತ ಮುಖ್ಯ. ಗೋ ದಾನ, ಭೂ ದಾನ ಹಾಗೂ ಇತರೆ ದಾನಗಳಿಗಿಂತ ಮನುಷ್ಯನಿಗೆ ಅಗತ್ಯವಾದ ನೇತ್ರ ದಾನ, ರಕ್ತ ದಾನ, ಅಂಗ ದಾನ ಶ್ರೇಷ್ಠವಾದದ್ದು.  ಶಿವಮೂರ್ತಿ ಶರಣರು ಸ್ವತಃ ನೇತ್ರದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ  ಎಂದರು.

ನಗರಸಭೆ ಆಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿದರು. ಶರಣ ಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷರಾದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ, ಮುಸ್ಲಿಂ ಸಮಾಜದ ಮುಖಂಡ ಮಹಮ್ಮದ್ ಸಾದತ್, ಮಾದಾರ ಸಮಾಜದ ಮುಖಂಡ ಎಂ.ತಿಪ್ಪೇಸ್ವಾಮಿ, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಎನ್.ಜಯಣ್ಣ, ವಚನ ಕಮ್ಮಟ
ಪರೀಕ್ಷೆಗಳ ನಿರ್ದೇಶಕ ಎಂ.ವೀರಭದ್ರಪ್ಪ ಮತ್ತಿತರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೀದರ್‍ನ ಸಾಹಿತಿ ಸಂಗಮೇಶ್ ಎನ್. ಜವಾದಿ ಅವರನ್ನು ಗೌರವಿಸಲಾಯಿತು. 

error: Content is protected !!