ಮಡಿಕಟ್ಟೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಮಡಿವಾಳ ಸಮುದಾಯದ ಮನವಿ

ದಾವಣಗೆರೆ, ಜು.11- ನಗರದ ರಾಷ್ಟ್ರೀಯ ಹೆದ್ದಾರಿ ಜಿಲ್ಲಾ ಪಂಚಾಯತ್ ಸಮೀಪ ಇರುವ ಮಡಿಕಟ್ಟೆಗೆ (ಧೋಬಿಘಾಟ್‌ಗೆ) ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಮಡಿವಾಳ ಸಮುದಾಯದ ಮಡಿಕಟ್ಟೆಯಲ್ಲಿ ಕೆಲಸ ಮಾಡುವ ವೃತ್ತಿ ಬಾಂಧವರು ಪಾಲಿಕೆ ಮಹಾಪೌರರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯ್ತಿ ಸಮೀಪ ಇರುವ ಮಡಿಕಟ್ಟೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವರ್ಗದ ನಾಗರಿಕರ, ವಸತಿ ಗೃಹಗಳ, ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳ ಬಟ್ಟೆಗಳನ್ನು ಶುಚಿ ಮಾಡುವ ಕಾಯಕದಲ್ಲಿ ನಿರತರಾಗಿರುವ ನಮಗೆ ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ ಎಂದು ಸಮುದಾಯದ ಮುಖಂಡ ಹೆಚ್.ಜಿ. ಉಮೇಶ್ ಹೇಳಿದರು.

ಜಿಲ್ಲಾಡಳಿತ ಈ ಹಿಂದೆ 1 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಉತ್ತಮವಾದ ಕಟ್ಟಡ ನಿರ್ಮಾಣ ಮಾಡಿತ್ತು. ಆದರೆ ಇಲ್ಲಿ ಅವಶ್ಯವಿರುವ ಬಟ್ಟೆ ತೊಳೆಯುವ ಮಿಷಿನ್‌ಗಳನ್ನು ಅಳವಡಿಸಲಿಕ್ಕೆ ಸಾಧ್ಯವಾಗಿಲ್ಲ. ಇದಲ್ಲದೇ ಬಟ್ಟೆ ತೊಳೆಯಲಿಕ್ಕೆ ನೀರಿನ ಅಭಾವ ಕೂಡ ಹೆಚ್ಚಾಗಿದೆ. ಕಾರಣ ಪಾಲಿಕೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಅವಶ್ಯವಿರುವ ಯಂತ್ರಗಳನ್ನು ಅಳವಡಿಸಿ, ನೀರಿನ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.

ಈ ಸಂಬಂಧ ಅಧಿಕಾರಿಗಳು ಮತ್ತು ಶಾಸಕ ರೊಂದಿಗೆ ಚರ್ಚಿಸಿ ಸೂಕ್ತ ಸೌಲಭ್ಯ ಕಲ್ಪಿಸುವುದಾಗಿ ಮೇಯರ್ ಅಜಯಕುಮಾರ್ ಭರವಸೆ ನೀಡಿ ದರು. ಈ ವೇಳೆ ಮಾಧ್ಯಮ ಸಲಹೆಗಾರ ಎಂ.ವೈ. ಸತೀಶ್, ಮಡಿಕಟ್ಟೆ ಸಮಿತಿ ಅಧ್ಯಕ್ಷ ಅಡಿವೆಪ್ಪ, ಕಾರ್ಯದರ್ಶಿ ಎಂ. ರವಿ, ಬಿ. ರವಿಕುಮಾರ್, ಎಂ.ವೈ. ರಮೇಶ್, ನಿಂಗರಾಜ್, ರಾಕೇಶ್, ಶಿವಮೂರ್ತೆಪ್ಪ, ಗುತ್ಯಪ್ಪ, ಬಸವರಾಜ್, ಶಂಕರ್, ಮಡಿವಾಳಪ್ಪ, ಸೋಮಶೇಖರ್, ಮಂಜುನಾಥ್ ಮಟ್ಟಿ, ಪರಶುರಾಮ, ಷಣ್ಮುಖಪ್ಪ ಇನ್ನಿತರರಿದ್ದರು.

error: Content is protected !!