ದಾವಣಗೆರೆ, ಅ.10- ಕೋವಿಡ್-19 ಪರಿಹಾರದ ಸಹಾಯ ಧನ 5 ಸಾವಿರ ರೂ.ಗಳನ್ನು ನಿಜವಾದ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗೆ ತಕ್ಷಣವೇ ಜಮೆ ಮಾಡುವಂತೆ ಆಗ್ರಹಿಸಿ ಶ್ರಮಶಕ್ತಿ ಕಟ್ಟಡ ಕಾರ್ಮಿಕರ ಯೂನಿಯನ್ ನೇತೃತ್ವದಲ್ಲಿ ನಗರದ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿ ಮುಂಭಾಗದಲ್ಲಿ ನಿನ್ನೆ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ನಂತರ ಸಹಾಯಕ ಕಾರ್ಮಿಕ ಆಯುಕ್ತರ ಮುಖಾಂತರ ಕಾರ್ಮಿಕ ಮಂತ್ರಿಗಳಿಗೆ ಹಕ್ಕೊತ್ತಾಯಗಳ ಮನವಿ ಸಲ್ಲಿಸಿದರು.
ನಗರ ಮತ್ತು ಜಿಲ್ಲೆಯಲ್ಲಿ ಸಾವಿರಾರು ಕಟ್ಟಡ ಕಾರ್ಮಿಕರಿದ್ದಾರೆ. ಈಗಾಗಲೇ ಮಂಡಳಿಯಿಂದ ಕೋವಿಡ್-19 ಪರಿಹಾರವಾಗಿ 5 ಸಾವಿರ ರೂ. ಹಣ ಕೆಲವು ಕಾರ್ಮಿಕರಿಗೆ ಮಾತ್ರ ಜಮೆಯಾಗಿದೆ. ಅದರಲ್ಲಿ ಕಟ್ಟಡ ಕ್ಷೇತ್ರದಲ್ಲಿ ಕೆಲಸ ಮಾಡದವರೂ ಸಹ ಸೇವಾ ಸಿಂಧು ಆನ್ಲೈನ್ನಲ್ಲಿ ಅರ್ಜಿ ಹಾಕಿ ಕೋವಿಡ್-19 ಪರಿಹಾರ ಸಹಾಯ ಧನವನ್ನು ಪಡೆದಿದ್ದಾರೆ. ನಿಜವಾದ ಕಾರ್ಮಿಕರಿಗೆ ಪರಿಹಾರ ಹಣ ಬಂದಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ದಿನದಿಂದ ದಿನಕ್ಕೆ ಕೊರೊನಾ ರೋಗ ಹಬ್ಬುತ್ತಿದ್ದು, ಇಂತಹ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಸರ್ಕಾರ ಅನ್ಲಾಕ್ ಮಾಡಿದ ತಕ್ಷಣ ಹಣ ಹಾಕುವುದನ್ನು ನಿಲ್ಲಿಸಿರುವುದು ಕಾರ್ಮಿಕ ವಿರೋಧಿಯಾಗಿದೆ. ನಾವು ಕಟ್ಟಿದ ನೋಂದಣಿ ಶುಲ್ಕದ ಹಣ ಮತ್ತು ಸೆಸ್ ಹಣ ಸೇರಿ 8 ರಿಂದ 10 ಕೋಟಿ ಹಣ ಮಂಡಳಿಯಲ್ಲಿದೆ. ಆದರೂ ಸಹ ನೈಜವಾದ ಕಟ್ಟಡ ಕಾರ್ಮಿಕರಿಗೆ ಪರಿಹಾರ ನೀಡಿಲ್ಲ ಎಂದು ಖಂಡಿಸಿದರು.
ಪ್ರತಿಭಟನೆಯಲ್ಲಿ ಜಬೀನಾ ಖಾನಂ, ಎಂ. ಕರಿಬಸಪ್ಪ, ಅನ್ವರ್ಖಾನ್, ಜಲೀವುಲ್ಲಾ, ಮುಬಾರಕ್, ಮೌಲಾನಾಸಾಬ್, ಅಸ್ಲಂ, ಶಿವಪ್ಪ, ನೂರ್ ಅಹ್ಮದ್, ಸೈಯದ್ ಸುಭಾನ್, ನಿಜಾಂ, ಸಾಧಿಕ್, ದಾದಾಪೀರ್, ಗೌಸ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.