ಹರಿಹರ : ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯಲ್ಲಿ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಅಭಿಮತ
ಹರಿಹರ, ಜು.2- ಕೊರೊನಾ ಹೆಮ್ಮಾರಿ ಯನ್ನು ಸ್ವಚ್ಛತೆ ಕಾಪಾಡಿಕೊಳ್ಳುವುದರ ಮೂಲಕ ಹಾಗೂ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವುದರೊಂದಿಗೆ ಓಡಿಸಲು ನಾವೆಲ್ಲ ಕೈ ಜೋಡಿಸಬೇಕು ಎಂದು ಜಿಲ್ಲಾ ಚಿಗಟೇರಿ ಸಾರ್ವ ಜನಿಕ ಸರ್ಕಾರಿ ಆಸ್ಪತ್ರೆಯ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಅಭಿಪ್ರಾಯಪಟ್ಟರು.
ನಗರದ ಗೆಳೆಯರ ಬಳಗ ಮತ್ತು ಪತ್ರಕರ್ತರ ಜಂಟಿ ಆಶ್ರಯದಲ್ಲಿ ಇಲ್ಲಿನ ಕಾಟ್ವೆ ಭವನದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೊರೊನಾ ನಿಯಂತ್ರಣದಲ್ಲಿ ವೈದ್ಯರ ಪಾತ್ರ ಪ್ರಾಮುಖ್ಯವಾದುದು. ಹಗಲು, ರಾತ್ರಿ ಎನ್ನದೆ ವೈದ್ಯರು, ದಾದಿಯರು ಕೊರೊನಾ ಸೋಂಕಿತರನ್ನು ಆರೈಕೆ ಮಾಡಿ ರೋಗ ನಿಯಂತ್ರಿಸುತ್ತಿದ್ದಾರೆ. ಜಾಲಿನಗರದಲ್ಲಿ ಮೊದಲು ಪತ್ತೆಯಾದ ಪ್ರಕರಣ ನಮಗೆ ಬಹಳ ಇಕ್ಕಟ್ಟಿಗೆ ಸಿಕ್ಕಿಸಿತ್ತು. ಆದರೆ, ಎದೆಗುಂದದೆ ಒಟ್ಟು 18 ಜನರನ್ನು ಬಸ್‍ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕೊರೊನಾ ಟೆಸ್ಟ್ ಮಾಡಿಸಿ, ನೆಗೆಟಿವ್ ಬಂದವರನ್ನು ಹೋಟೆಲ್‍ನಲ್ಲಿ ಉಳಿಸಿ ಬಂದ ಆ ಕ್ಷಣ ನಾನು ಮರೆಯುವ ಹಾಗಿಲ್ಲ. ಇಂದು ಅಲ್ಲಿ ಯಾವುದೇ ಹೊಸ ಪ್ರಕರಣವಿಲ್ಲ. ಅಲ್ಲಿ ಜನರು ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ದಾವಣಗೆರೆಯ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಕಣ್ಣಿಗೆ ಕಾಣದ ಪ್ರಚಾರ ಪಡಿಸುವ ಮತ್ತು ಸರ್ಕಾರ ಉತ್ತಮ ಆಡಳಿತ ನಡೆಸುವಂತೆ ತೋರಿ ಸುವುದು ಪತ್ರಕರ್ತರಿಂದ ಮಾತ್ರ ಸಾಧ್ಯ ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಬಸವರಾಜ್ ಬಣಕಾರ್ ಮಾತನಾಡಿ, ಡಾ.ಬಿ.ಸಿ.ರಾಯ್ ಅವರ ಜನ್ಮದಿ ನವನ್ನು ವೈದ್ಯರ ದಿನಾಚರಣೆ ಎಂದು ಆಚರಿಸುತ್ತಿದ್ದಾರೆ. ವೈದ್ಯರು ತಮ್ಮ ಜೀವದ ಹಂಗು ತೊರೆದು ರೋಗಿಗಳ ಪ್ರಾಣ ರಕ್ಷಿಸುತ್ತಿ ದ್ದಾರೆ. ವೈದ್ಯರ ಕಾರ್ಯ ಪವಿತ್ರವಾದುದು ಎಂದರು. ಪತ್ರಕರ್ತರು ಕೂಡಾ ಸಾಮಾಜಿಕ ವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಮಾತನಾಡಿ, ಪತ್ರಿಕೆಗಳಲ್ಲಿ ಸಾವು, ಅಪಘಾತ, ಕೊಲೆಯಂತಹ ಸುದ್ದಿಗಳನ್ನು ದಿನಬೆಳಗಾದರೆ ನೋಡುವಂತಹ ಪರಿಸ್ಥಿತಿ ಇರುವ ಬಗ್ಗೆ ವಿಷಾದಿಸಿದರು. ಅಭಿವೃದ್ಧಿಯ ಸುದ್ದಿಗಳನ್ನು ನಾವು ನೋಡುವಂತಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಹರಿಹರ ನಗರವಾಣಿ ಸಂಪಾದಕ ಸುರೇಶ್ ಕುಣೆಬೆಳಕೆರೆ ಅವರು ಅಧ್ಯಕತೆ ವಹಿಸಿದ್ದರು.
ಡಾ.ಎಸ್.ಹೆಚ್.ಪ್ಯಾಟಿ, ನಗರ ಪೊಲೀಸ್ ಠಾಣೆ ಪಿಎಸ್‍ಐ ಶ್ರೀಮತಿ ಶೈಲಶ್ರೀ, ಪಿಡಬ್ಲೂಡಿ ಎಇ ಚಂದ್ರಕಾಂತ್, ಡಾ.ಸುರೇಶ್ ಬಸರಕೋಡ್, ಡಾ.ಪ್ರತಾಪ್, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ವೀರಭದ್ರಪ್ಪ ಆದಾಪುರ, ತಾ.ಪಂ. ಸದಸ್ಯ ಕೊಟ್ರಪ್ಪಗೌಡ, ಮಂಜುನಾಥ್ ಪೂಜಾರ್, ಹಿರಿಯ ಪತ್ರಿಕಾ ವಿತರಕರಾದ ಹನುಮಂತಪ್ಪ, ಪ್ರದೀಪ್, ನಮ್ಮ ಗುರಿ ಪತ್ರಿಕಾ ಸಂಪಾದಕ ಜಿ.ಎಂ. ಮಂಜುನಾಥ್, ವಿಶ್ವವಾಣಿ ಪತ್ರಿಕೆಯ ತಾಲ್ಲೂಕು ವರದಿಗಾರ ವಿಶ್ವನಾಥ ಮೈಲಾಳ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸುಬ್ರಹ್ಮಣ್ಯ ನಾಡಿಗೇರ್ ಪ್ರಾಸ್ತಾವಿಕವಾಗಿ ನುಡಿದರು.