ಕೂಡ್ಲಿಗಿಯಲ್ಲಿ ವನ್ಯಜೀವಿ ಸಪ್ತಾಹ ಗುಡೇಕೋಟೆಗೆ ಬೈಕ್ ಜಾಥಾ

ಕೂಡ್ಲಿಗಿ, ಅ.2 –   ತಾಲ್ಲೂಕಿನ ಗುಡೇಕೋಟೆಗೆ ಬಳ್ಳಾರಿಯಿಂದ ವನ್ಯಜೀವಿ ಸಂರಕ್ಷಣಾ ತಂಡದವರು ವನ್ಯಜೀವಿ ಸಪ್ತಾಹದ ಅಂಗವಾಗಿ ಬೈಕ್ ಜಾಥಾ ಮೂಲಕ ಗುಡೇಕೋಟೆ ಕರಡಿಧಾಮಕ್ಕೆ ಆಗಮಿಸಿದಾಗ ಕೂಡ್ಲಿಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರಂಗನಾಥ, ಗುಡೇಕೋಟೆ ವಲಯ ಅರಣ್ಯಾಧಿಕಾರಿ ರೇಣುಕಾ ಅವರು ಬೈಕ್ ಜಾಥಾವನ್ನು  ಸ್ವಾಗತಿಸಿದರು. 

ವನ್ಯಜೀವಿ ಉಳಿವಿಗೆ ಅರಣ್ಯ ಇಲಾಖೆಯ ಜೊತೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದ್ದು ಜೀವ ವೈವಿಧ್ಯ ಕಾಪಾಡಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಕೂಡ್ಲಿಗಿಯ ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಜಿ.ರಂಗನಾಥ ಅವರು ಕರೆ ನೀಡಿದರು. 

ಗುಡೇಕೋಟೆ ಅರಣ್ಯದಲ್ಲಿರುವ ಕಪ್ಪು ಕರಡಿಗಳು ಇಡೀ ವಿಶ್ವದಲ್ಲಿಯೇ ಅಪರೂಪದ ಕರಡಿಗಳ ಸಂತತಿಯಾಗಿದ್ದು, ಇದೇ ರೀತಿಯಲ್ಲಿ ಅನೇಕ ಸರಿಸೃಪಗಳು, ಜೀವವೈವಿಧ್ಯಗಳು ಗುಡೇಕೋಟೆ ಅರಣ್ಯದಲ್ಲಿವೆ ಎಂದು ತಿಳಿಸಿದರು.

ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ರೇಣುಕಾ ಮಾತನಾಡಿ, ಪ್ರಾಣಿ,ಪಕ್ಷಿಗಳಿಗೂ ನಮ್ಮಂತೆ ಬದುಕುವ ಹಕ್ಕಿದೆ. ಇಂದು ಪ್ರಾಣಿ, ಪಕ್ಷಿಗಳ ಸ್ವಚ್ಛಂದದ ಬದುಕಿಗೆ ಮನುಷ್ಯ ಅಡ್ಡಿಯಾಗುತ್ತಿದ್ದು, ಬೇಟೆಯಾಡುವ ಮೂಲಕ ಪ್ರಾಣಿ ಪಕ್ಷಿಗಳ ಜೀವ ತೆಗೆಯುವ, ಸಂತತಿಯನ್ನು ನಾಶಮಾಡುವ ಕೃತ್ಯಗಳು ನಡೆಯುತ್ತಿವೆ. ಬೇಟೆಯಾಡುವುದನ್ನು ಕೈಬಿಟ್ಟು  ವನ್ಯಜೀವಿಗಳಿಗೂ ಮನುಷ್ಯರಂತೆ ಬದುಕುವ ಹಕ್ಕಿದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ ಎಂದರು. 

ಬಳ್ಳಾರಿಯಿಂದ ವನ್ಯಜೀವಿ ಸಂರಕ್ಷಣಾ ಬಳಗದ 40 ಕ್ಕೂ ಹೆಚ್ಚು ಬೈಕ್ ಗಳು ಸಾರ್ವಜನಿಕರಿಗೆ ವನ್ಯಜೀವಿ ಉಳಿವಿನ ಅರಿವು ಮೂಡಿಸುವ ಸಲುವಾಗಿ ದರೋಜಿ, ಸಂಡೂರು, ಕೂಡ್ಲಿಗಿ ಮೂಲಕ ಶುಕ್ರವಾರ ಮಧ್ಯಾಹ್ನ ಗುಡೇಕೋಟೆಗೆ ಆಗಮಿಸಿದರು.  

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಪಿ.ಮಹೇಶ್, ಗುರುಬಸವರಾಜ ಸೇರಿದಂತೆ ಗುಡೇ ಕೋಟೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು. 

error: Content is protected !!