ಮಲೇಬೆನ್ನೂರು, ಅ.1- ಎಕ್ಕೆಗೊಂದಿ-ಭಾನುವಳ್ಳಿವರೆಗಿನ ರಸ್ತೆ ದುರಸ್ತಿಗೆ ಆಗ್ರಹಿಸಿ, ರೈತ ಸಂಘ ಹಾಗೂ ಜಯ ಕರ್ನಾಟಕ ಸಂಘಟನೆಗಳು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಎಕ್ಕೆಗೊಂದಿಯಿಂದ ಭಾನುವಳ್ಳಿಗೆ ಕೂಡುವ 3 ಕಿಮೀ ರಸ್ತೆ ತುಂಬಾ ಹದಗೆಟ್ಟಿದ್ದು, ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಪಿಡಬ್ಲ್ಯೂಡಿ ಇಲಾಖೆಗೆ ಸಾಕಷ್ಟು ಬಾರಿ ತಿಳಿಸಿದ್ದರೂ, ಯಾವುದೇ ಕ್ರಮ ಕೈಗೊಂ ಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿ ತಡೆ ವಿಷಯ ತಿಳಿದು, ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರು, ಭಾನುವಳ್ಳಿ ಗ್ರಾಮಸ್ಥರ ಮನವೊಲಿಸಿ, ಪ್ರತಿಭಟನೆ ಕೈಬಿಡಿಸುವ ಪ್ರಯತ್ನ ವಿಫಲವಾಯಿತು.
ಪಿಡಬ್ಲ್ಯೂಡಿ ಇಲಾಖೆಯವರನ್ನು ಕರೆಸುವಂತೆ ಪಟ್ಟು ಹಿಡಿದಾಗ, ಎಇಇ ನಾಗರಾಜಪ್ಪ ಅವರು ಸ್ಥಳಕ್ಕೆ ಆಗಮಿಸಿದರು. ಸದ್ಯಕ್ಕೆ 5 ಲಕ್ಷ ರೂ. ವೆಚ್ಚದಲ್ಲಿ ಎಕ್ಕೆಗೊಂದಿ-ಭಾನುವಳ್ಳಿ ರಸ್ತೆಯನ್ನು ಅಭಿವೃದ್ಧಿ ಪಡಿಸಿಕೊಡುತ್ತೇವೆ. ನಂತರ 13 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆಯನ್ನು ಡಬಲ್ ರಸ್ತೆಯನ್ನಾಗಿ ಮಾಡುವ ಯೋಜನೆ ಇದೆ ಎಂದು ಭರವಸೆ ನೀಡಿದಾಗ, ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.
ಸಿಪಿಐ ಶಿವಪ್ರಸಾದ್, ಪಿಎಸ್ಐ ವೀರಬಸಪ್ಪ ಮತ್ತು ಸಿಬ್ಬಂದಿ ವರ್ಗದವರು ಬಂದೋಬಸ್ತ್ ಕೈಗೊಂಡಿದ್ದರು. ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಹಳ್ಳಿಯ ಪ್ರಭುಗೌಡ, ಸಿರಿಗೆರೆ ಪಾಲಾಕ್ಷಪ್ಪ, ಹಾಳೂರು ನಾಗರಾಜ್, ಭಾನುವಳ್ಳಿಯ ಕೊಟ್ರೇಶ್, ಪ್ರಕಾಶ್, ಎಂ.ಬಸಪ್ಪ, ಷಣ್ಮುಖಯ್ಯ, ರುದ್ರಗೌಡ, ಬಸಪ್ಪ ರೆಡ್ಡಿ, ಬಸವರಾಜಪ್ಪ, ಮಹೇಶ್ವರ ಸ್ವಾಮಿ, ಜಿಗಳಿಯ ಬೆಣ್ಣೇರ ನಂದ್ಯೆಪ್ಪ ಸೇರಿದಂತೆ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.