ಹರಪನಹಳ್ಳಿ : ಸರ್ಕಾರಿ ನೌಕರರ ಒಕ್ಕೂಟದ ಪ್ರತಿಭಟನೆ

ಹರಪನಹಳ್ಳಿ, ಅ.1- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಿದರು.

ಈ ವೇಳೆ  ಒಕ್ಕೂಟದ  ತಾಲ್ಲೂಕು ಅಧ್ಯಕ್ಷ ಎಂ.ಆಂಜನೇಯ ಮಾತ ನಾಡಿ, ಕೊರೊನಾ ವೈರಾಣು ಹರಡುವಿಕೆಯಿಂದ ಸರ್ಕಾರಿ ನೌಕರರು ಆರೋಗ್ಯ ಸೇವೆಯ ಕೆಲಸದ ಒತ್ತಡಗಳಿಂದ ಸಂಕಷ್ಟಕ್ಕೆ ಈಡಾಗುತ್ತಿದ್ದ ಸಂದರ್ಭದಲ್ಲಿ ಸರ್ಕಾರ 18 ತಿಂಗಳ ತುಟ್ಟಿಭತ್ಯೆ, ಗಳಿಕೆ ರಜೆ ರದ್ದುಗೊಳಿ ಸಿದ್ದು ಖಂಡನೀಯ. ಕೇಂದ್ರ ಸರ್ಕಾರದ ನಿಯಮ 56 (ಜೆ) ದಡಿ ನೌಕರರ ಅದಕ್ಷತೆ, ಸಂಶಯಾತ್ಮಕ ನಡವಳಿಕೆ, ಇನ್ನಾವುದರ ಕಾರಣದ ಮೇರೆಗೆ 30 ವರ್ಷ ಸೇವೆ ಪೂರೈಸಿರುವ ಅಥವಾ 55 ವರ್ಷ ಮೇಲ್ಪಟ್ಟ ನೌಕರರನ್ನು ಕಡ್ಡಾಯವಾಗಿ ನಿವೃತ್ತಿ ಗೊಳಿಸಲು ಆದೇಶ ಮಾಡಿದೆ ಎಂದು ಹೇಳಿದರು. 

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ರಂಗಕ್ಕೆ ಸರ್ಕಾರದಿಂದ ನೀಡಲಾಗುತ್ತಿರುವ ನೆರವಿನಿಂದ ಹಿಂದೆ ಸರಿಯುವ  ಲಕ್ಷಣಗಳಿವೆ. ಶಿಕ್ಷಣವು ಇತ್ತಿಚಿನವರೆಗೂ ಕೇಂದ್ರ ಮತ್ತು ರಾಜ್ಯಗಳೆರಡೂ ನಿರ್ವಹಿಸುವ ವಿಷಯ ವಸ್ತುವಾಗಿತ್ತು. ಇದೀಗ ರಾಜ್ಯಗಳ ಅಧಿಕಾರವನ್ನು ಮೊಟುಕುಗೊಳಿಸಿ, ಶಿಕ್ಷಣ ವಲಯವನ್ನು ಸಂಪೂರ್ಣವಾಗಿ  ಕೇಂದ್ರೀಕರಿಸುವ ಮತ್ತು ಖಾಸಗೀಕರಣಗೊಳಿಸುವ ಕ್ರಮದಿಂದ ಉಳ್ಳವರಿಗಷ್ಟೇ ಶಿಕ್ಷಣ ದಕ್ಕವುದಿದ್ದು, ಇಲ್ಲದವರಿಗೆ  ಸಾರ್ವಜನಿಕ ಶಿಕ್ಷಣ ಮರೀಚಿಕೆಯಾಗಿ ಸರ್ಕಾರಿ ಶಾಲೆಗಳು ಮುಚ್ಚಿ ಶಿಕ್ಷಕರು ಬೀದಿಗೆ ತಳ್ಳಲ್ಪಡುತ್ತಾರೆ ಎಂದು ಕಿಡಿ ಕಾರಿದರು.

ಒಕ್ಕೂಟದ ಪದಾಧಿಕಾರಿಗಳಾದ ಎಂ.ಆನಂದ, ಪಿ.ವಿರೂಪಾಕ್ಷಿ, ಮೂರ್ತಿನಾಯ್ಕ್, ಪಿ.ಬಸವರಾಜಪ್ಪ, ಕೆ.ಮರಿಯಪ್ಪ, ಈ.ಯಂಕಾನಾಯ್ಕ್ ಹಾಗೂ ಇತರರು ಭಾಗವಹಿಸಿದ್ದರು.

error: Content is protected !!