ಗಂಗಾ ಕಲ್ಯಾಣ ಯೋಜನೆ ಕಂಟ್ರ್ಯಾಕ್ಟರ್ಗಳಿಂದಲೂ ಹಣ ವಸೂಲಿ: ತಾ.ಪಂ. ಸಭೆಯಲ್ಲಿ ಸದಸ್ಯರ ಆರೋಪ
ದಾವಣಗೆರೆ, ಜೂ.22-ವಿದ್ಯುತ್ ಟೆಂಡರ್ ಪಡೆದವರು ಒಂದು ಟಿ.ಸಿ ಹಾಕಿಸಲು ಒಬ್ಬ ರೈತನಿಂದ ರೂ. 40 ಸಾವಿರ ಕೇಳುವ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಬೇತೂರು ಕ್ಷೇತ್ರದ ತಾಲ್ಲೂಕು ಪಂಚಾಯ್ತಿ ಸದಸ್ಯ ಸಂಗಜ್ಜಗೌಡ್ರು ತಾ.ಪಂ. ಸಾಮಾನ್ಯ ಸಭೆಯಲ್ಲಿಂದು ಆರೋಪಿಸಿದರು.
ಬೋರ್ವೆಲ್ ಹೊಂದಿರುವ ರೈತರಿಗೆ ಬೆಳೆ ಬೆಳೆಯಲು ವಿದ್ಯುತ್ ಸಮಸ್ಯೆ ಉಂಟಾಗಿದ್ದು, ಇದರಿಂದ ರೈತರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದಿಂದ ಬರುವ ಸೌಲಭ್ಯವನ್ನು ಸರಿಯಾದ ರೀತಿಯಲ್ಲಿ ನೀಡಬೇಕು ಎಂದು ಆಗ್ರಹಿಸಿದರು.
ಲೋಕಿಕೆರೆ ಕ್ಷೇತ್ರದ ಸದಸ್ಯ ಮುರುಗೇಂದ್ರಪ್ಪ, ಗಂಗಾ ಕಲ್ಯಾಣ ಯೋಜನೆಯಡಿ ಕಂಟ್ರ್ಯಾಕ್ಟರ್ಗಳೂ ಸಹ ಹಗಲು ದರೋಡೆ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಓ ದಾರುಕೇಶ್, ಈ ರೀತಿಯಾಗಿದ್ದಲ್ಲಿ ಕೂಡಲೇ ಅಂತಹ ಕಂಟ್ರ್ಯಾಕ್ಟರ್ಗಳನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಿ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ತಂತಿ ತುಂಡಾಗಿ ಬೀಳುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಜನರಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದು ಸದಸ್ಯ ಸಂಗಜ್ಜಗೌಡ್ರು ಹೇಳಿದಾಗ, ಬೆಸ್ಕಾಂ ಅಧಿಕಾರಿ ಉತ್ತರಿಸಿ, ವಿದ್ಯುತ್ ತಂತಿ ಕಟ್ಟಾಗಿ ಆಕಸ್ಮಾತ್ ಆಗಿ ಯಾರಾದರೂ ಮುಟ್ಟಿದಲ್ಲಿ ಅವಘಡ ಸಂಭವಿಸುತ್ತದೆ. ಈ ಹಿನ್ನೆಲೆಯಲ್ಲಿ ನಾವೂ ಸಹ ವಿದ್ಯುತ್ ಅವಘಡದ ಕುರಿತಾಗಿ ಜನರಲ್ಲಿ ಅರಿವು ಮೂಡಿಸಲು ಬೀದಿ ನಾಟಕದಂತಹ ಅನೇಕ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದ್ದು, ವಿದ್ಯುತ್ ಕಂಬಗಳಿಗೆ ಜಾನುವಾರು ಕಟ್ಟಬೇಡಿ ಎಂದು ತಿಳಿ ಹೇಳಲಾಗುತ್ತಿದೆ ಎಂದರು.
ಆಲೂರು ಕ್ಷೇತ್ರದ ಸದಸ್ಯ ಲಿಂಗರಾಜು, ಸರ್ಕಾರದ ಹಲವು ಯೋಜನೆಗಳ ಸಹಾಯಧನವು ಫಲಾನುಭವಿಗಳಿಗೆ ತಲುಪುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಉತ್ತರಿಸಿದ ಇಓ, ಈ ರೀತಿ ತೊಂದರೆ ಆಗದಂತೆ ಕೂಡಲೇ ಸಂಬಂಧಪಟ್ಟ ಫಲಾನುಭವಿಗಳಿಗೆ ಸಹಾಯಧನ ತಲುಪಿಸಬೇಕೆಂದು ಸೂಚನೆ ನೀಡಿದರು.
ಶಿಷ್ಟಾಚಾರ ಪಾಲಿಸಿ: ಇಲಾಖೆಯ ಯೋಜನಾ ಕಾರ್ಯಕ್ರಮಗಳಿಗೆ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಕರೆಯುತ್ತಿಲ್ಲ ಎಂದು ಸದಸ್ಯರ ದೂರುಗಳಿವೆ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳನ್ನು ಕರೆದು ಕಾರ್ಯಕ್ರಮ ನಡೆಸುವುದು ಸರ್ಕಾರಿ ಅಧಿಕಾರಿಗಳ ಬಾಧ್ಯತೆ ಹಾಗೂ ಜವಾಬ್ದಾರಿ ಯಾಗಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದಾರುಕೇಶ್ ಹೇಳಿದರು.
ಮಳೆಗಾಲ ಇದಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಗಾಳಿ ಮಳೆಗೆ ವಿದ್ಯುತ್ ಅವಘಡ ಸಂಭವಿಸುವ ಲಕ್ಷಣಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಜನ ಸಾಮಾನ್ಯರ ಹಿತದೃಷ್ಟಿಯಿಂದ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.