ಹರಿಹರದಲ್ಲಿ ಜೆಡಿಎಸ್ ಪ್ರತಿಭಟನೆ
ಹರಿಹರ, ಜೂ.18- ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿರುವವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹರಿಹರ ತಾಲ್ಲೂಕು ಜೆಡಿಎಸ್ ಮುಖಂಡರು ಇಂದು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಹೆಚ್. ಶಿವಪ್ಪ ವೃತ್ತದಲ್ಲಿ ಇರುವ ಜೆಡಿಎಸ್ ಕಚೇರಿಯಿಂದ ಪ್ರಾರಂಭಗೊಂಡ ಮೆರವಣಿಗೆಯು ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆ, ಗಾಂಧಿ ವೃತ್ತದ ಮುಖಾಂತರ ಸಂಚರಿಸಿ ತಹಶೀಲ್ದಾರ್ ಕಚೇರಿವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಸ್ ಅಧ್ಯಕ್ಷ ಬಿ.ಚಿದಾನಂದಪ್ಪ ಮಾತನಾಡಿ, ಶಿವಶಂಕರ್ ಅವರನ್ನು ಹತ್ಯೆ ಮಾಡಲು ಹರಿಹರದ ನಂದಿ ನಿರ್ಮಾಣ ಸಂಸ್ಥೆ ಮಾಲೀಕ – ಗುತ್ತಿಗೆದಾರ ಮಂಜುನಾಥ್ ಮತ್ತು ಆತನ ಸಹಚರರಾದ ವಿನಯ್, ರಾಕೇಶ್ ಸೇರಿಕೊಂಡು ಸಂಚು ರೂಪಿಸಿರುವುದು ಜೆಡಿಎಸ್ ಖಂಡಿಸುತ್ತದೆ ಎಂದು ಹೇಳಿದರು.
ದೂಡಾದಿಂದಾಗಲೀ, ಹರಿಹರ ನಗರಸಭೆಯಿಂದಾಗಲೀ ಕಾನೂನು ರೀತ್ಯಾ ಅನುಮೋದನೆಗಳನ್ನು ಪಡೆಯದೇ ಬಡಾವಣೆ ನಿರ್ಮಾಣಕ್ಕೆ ಮಂಜುನಾಥ್ ಮುಂದಾಗಿದ್ದರು. ಈ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಶಿವಶಂಕರ್ ಅವರು ಸಂಬಂಧಿಸಿದ ಇಲಾಖೆಗಳಿಗೆ ತಕರಾರು ಕೊಟ್ಟ ಕಾರಣ ಅಕ್ರಮ ಕಾಮಗಾರಿಗಳು ನಿಲ್ಲುವಂತಾದವು. ಇದರಿಂದ ಹೆಚ್ಚು ಹಣ ಮಾಡಬೇಕು ಎಂಬ ನಿರೀಕ್ಷೆಯಲ್ಲಿದ್ದ ಮಂಜುನಾಥ್ ಅವರು ಶಿವಶಂಕರ್ ಅವರನ್ನು ಹತ್ಯೆ ಮಾಡಿದರೆ ಬಡಾವಣೆ ನಿರ್ಮಾಣಕ್ಕೆ ಯಾವುದೇ ಅಡೆತಡೆಗಳು ಬರುವುದಿಲ್ಲ ಎಂದು ಭಾವಿಸಿ, ಹತ್ಯೆಯ ಸಂಚನ್ನು ರೂಪಿಸಿ ವಿಫಲವಾಗಿದ್ದಾರೆ ಎಂದು ಚಿದಾನಂದಪ್ಪ ಅವರು ವಿವರಿಸಿದರು.
ಈ ಹತ್ಯೆಯ ಸಂಚಿನಲ್ಲಿ ಕಾಣದ ಕೈಗಳು, ದುಷ್ಟಶಕ್ತಿಗಳು, ಪ್ರಭಾವಿ ವ್ಯಕ್ತಿಗಳು ಕೈ ಜೋಡಿಸಿರಬಹುದೆಂಬ ಶಂಕೆಯು ಮೂಡಿದೆ. ಹತ್ಯೆಗೆ ಸುಫಾರಿ ಕೊಟ್ಟು ಸಂಚು ರೂಪಿಸಿದವರನ್ನು ಈ ಕೂಡಲೇ ಬಂಧಿಸಿ ತನಿಖೆ ನಡೆಸಿ ಶಿಕ್ಷೆಗೊಳಪಡಿಸಬೇಕು ಎಂದು ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದರು.
ಜಿ.ಪಂ ಸದಸ್ಯೆ ವಿ.ಡಿ. ಹೇಮಾವತಿ, ನಗರಸಭೆ ಸದಸ್ಯರಾದ ಜಂಬಣ್ಣ ಗುತ್ತೂರು, ಪಿ.ಎನ್. ವಿರುಪಾಕ್ಷ, ಎಂ.ಹೆಚ್. ಭೀಮಣ್ಣ, ಆರ್.ಸಿ. ಜಾವೇದ್, ದಾದಾ ಖಲಂದರ್, ಮುಜಾಮಿಲ್ ಬಿಲ್ಲು, ಮಾಜಿ ನಗರಸಭೆ ಸದಸ್ಯರಾದ ಡಿ.ಉಜ್ಜೇಶ್, ಗಜಾನನ ಧಲಬಂಜನ್, ಹಬೀಬ್ ಉಲ್ಲಾ, ನಗೀನಾ ಸುಭಾನ್, ಹೊನ್ನಮ್ಮ ಕೊಂಡಜ್ಜಿ ಹಾಜಿ ಹಾಲಿ, ಬಿ. ಅಲ್ತಾಫ್, ಅತಾವುಲ್ಲಾ, ಮುಖಂ ಡರಾದ ದಾವಣಗೆರೆ ಅತಾವುಲ್ಲಾ ಖಾನ್, ಅಂಗಡಿ ಮಂಜುನಾಥ್ ಮಾರುತಿ ಬೇಡರ್, ಸುರೇಶ್ ಚಂದಾಪುರ, ಜಾಕೀರ್, ಆಯೂಬ್ ಖಾನ್, ದೇವರಬೆಳಕೆರೆ ಕರಿಬಸಪ್ಪ, ಮಹ ದೇವಪ್ಪ, ಅಮರಾವತಿ ನಾಗರಾಜ್, ಹಾಲ ಸ್ವಾಮಿ, ನಿಂಗಪ್ಪ ಭಾನುವಳ್ಳಿ, ನಂಜಪ್ಪ, ಜಿ. ಮುಬಾಶಿರ್, ಶಂಕರ್ ಗೌಡ್ರು, ಎನ್.ಹೆಚ್. ಪಾಟೀಲ್, ಗಿಣಿ, ಲಕ್ಷ್ಮಿ ರಾಜಾಚಾರ್, ಲತಾ ಕೊಟ್ರೇಶ್, ಕುಮಾರ್, ಹರೀಶ್, ಮಂಜುನಾಥ್, ರಾಜು, ಮಂಜುನಾಥ್, ಸಿದ್ದೇಶ್, ರೇವಣ ಸಿದ್ದಪ್ಪ, ಬಸವರಾಜಪ್ಪ, ವಾಮದೇವ, ಕಲ್ಯಯ್ಯಸ್ವಾಮಿ, ಎ.ಕೆ. ನಾಗಪ್ಪ, ಮಹೇಶ್ ಕುಮಾರ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.