ಹರಪನಹಳ್ಳಿ ತಾಲ್ಲೂಕಿನಲ್ಲಿ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ

ಹರಪನಹಳ್ಳಿ, ಜೂ.18- ಕೊರೊನಾ ಅತಂಕದ ನಡುವೆಯೂ ಗುರುವಾರ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಯಿತು. ತಾಲ್ಲೂಕಿನ ಒಟ್ಟು 2,395 ವಿದ್ಯಾರ್ಥಿಗಳು ನೋಂದಣಿಯಾಗಿದ್ದು 2,268 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 127 ವಿದ್ಯಾರ್ಥಿಗಳು ಗೈರಾಗಿದ್ದರು.

ಪಟ್ಟಣದ ಎಸ್‍ಯುಜೆಎಂ, ಹೆಚ್‍ಪಿಎಸ್, ಎಸ್‍ಎಸ್‍ಎಚ್ ಜೈನ್, ಸರ್ಕಾರಿ ಜ್ಯೂನಿಯರ್ ಕಾಲೇಜು ಹಾಗೂ ಅರಸಿಕೇರಿ ಕಾಲೇಜು ಸೇರಿದಂತೆ ಒಟ್ಟು ಐದು ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಿದವು.

ಗ್ರಾಮೀಣ ಭಾಗದ ಸರ್ಕಾರಿ, ಖಾಸಗಿ ಬಸ್ ಸಂಚಾರಗಳು ಇಲ್ಲದೇ ತಮ್ಮ ಸ್ವಂತ ವಾಹನಗಳ ಮೂಲಕ ವಿದ್ಯಾರ್ಥಿಗಳು ಪೋಷಕರೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. 

ಲಾಕ್‍ಡೌನ್‍ನಿಂದಾಗಿ ಕಳೆದ ಎರಡು ತಿಂಗಳು ಕಾಲ ಮನೆಯಲ್ಲಿ ಕಾಲ ಕಳೆದಿದ್ದ ವಿದ್ಯಾರ್ಥಿಗಳಿಗೆ ಪಂಜರದೊಳಗಿನ ಪಕ್ಷಿಯನ್ನು ಹೊರಗೆ ಕೈ ಬಿಟ್ಟಂತಾಗಿತ್ತು. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಪರಸ್ಪರ ಕುಶಲೋಪರಿ ಮಾತನಾಡಿಕೊಳ್ಳುತ್ತಿದ್ದರು. ಬೆಳಿಗ್ಗೆ 9 ರಿಂದ ವಿದ್ಯಾರ್ಥಿಗಳನ್ನು ಸರತಿ ಸಾಲಿನಲ್ಲಿ ಆರೋಗ್ಯ ಇಲಾಖೆಯಿಂದ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷೆ ನಡೆಸಿ, ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಿ, ಸ್ಯಾನಿಟೈಸರ್ ಕೊಡುವ ಮೂಲಕ ಪರೀಕ್ಷಾ ಕೊಠಡಿಯೊಳಗೆ ಬಿಡಲಾಯಿತು.

error: Content is protected !!