ರಾಣೇಬೆನ್ನೂರು, ಜೂ.15- ಇಲ್ಲಿನ ಎಪಿಎಂಸಿ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಮೂಲಕ ನಡೆದು ಬಹುಮತ ಪಡೆದ ಕಾಂಗ್ರೆಸ್‌ನ ಬಸವರಾಜ ಸವಣೂರ ಅಧ್ಯಕ್ಷರಾಗಿ, ಸುರೇಶ ಬಿರಾಳ ಉಪಾಧ್ಯಕ್ಷರಾಗಿ ಆಯ್ಕೆಯಾದರು.
9 ನಿರ್ದೇಶಕರುಗಳನ್ನು ಹೊಂದಿ, ಇದುವರೆಗೂ ಆಡಳಿತ ನಡೆಸುತ್ತಾ ಬಂದ ಕಾಂಗ್ರೆಸ್ ಪಕ್ಷ ಎದುರಾಳಿ ಬಿಜೆಪಿ ಸರ್ಕಾರದ ನಾಮಕರಣ ಸೇರಿದಂತೆ ತನ್ನ ಬಲವನ್ನು 8 ಕ್ಕೇರಿಸಿಕೊಂಡಿದೆ. ಅಧ್ಯಕ್ಷ ಬಸವರಾಜ ಅವರು ಬಿಜೆಪಿಯ ಒಂದು ಮತದೊಂದಿಗೆ 10 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸುರೇಶ ಅವರು ತಮ್ಮ ಪಕ್ಷದ 9 ಮತಗಳನ್ನಷ್ಟೇ ಪಡೆದರು.
ಅಧ್ಯಕ್ಷ ಸ್ಥಾನದ ಬಿಜೆಪಿ ಅಭ್ಯರ್ಥಿ ಹುಲ್ಲತ್ತಿ ಅವರು 7 ಮತಗಳನ್ನು, ಉಪಾಧ್ಯಕ್ಷ ಸ್ಥಾನದ ರಾಜೇಂದ್ರ ಅವರು 8 ಮತಗಳನ್ನು ಪಡೆದು ಪರಾಭವಗೊಂಡರು.
ಜನವರಿ ತಿಂಗಳಲ್ಲಿ ನಡೆದಿದ್ದ ಅಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭದಲ್ಲಿ ಕೆ.ಬಿ. ಕೋಳಿವಾಡರ ಅಳಿಯ ಕಾಂಗ್ರೆಸ್‌ನ ಶರಶ್ಚಂದ್ರ ಅವರ ಮತ ರದ್ದು ಗೊಳಿಸಲು ಪ್ರಯತ್ನ ನಡೆಸಿ ವಿಫಲಗೊಂಡ ಬಿಜೆಪಿ, ಈ ಬಾರಿ ತನ್ನದೇ ಒಂದು ಮತವನ್ನು ಕಳೆದುಕೊಂಡದ್ದು ಕೋಳಿವಾಡರ ರಾಜಕೀಯ ತಂತ್ರಗಾರಿಕೆ ಎಂದು ಹೇಳಲಾಗುತ್ತಿದೆ.
ಚುನಾಚಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಬಸನಗೌಡ ಕೋಟೂರ ನಡೆಸಿದರು.