ದಾವಣಗೆರೆ, ಜೂ.14- ನಗರದ ರಿಂಗ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಅನುದಾನದ 46 ಕೋಟಿ ವೆಚ್ಚದ 5.8 ಕಿಮೀ ಸಿಸಿ ರಸ್ತೆ ಕಾಮಗಾರಿಯನ್ನು ವಿಪಕ್ಷ ಸದಸ್ಯರು ಪರಿಶೀಲನೆ ಮಾಡಿದರು. ಸಂಬಂಧಪಟ್ಟ ಅಧಿಕಾರಿಗಳಾದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಚೀಫ್ ಇಂಜಿನಿಯರ್ ಸತೀಶ್, ಎಇಇ ರವಿ, ಗುರುಪಾದಯ್ಯ, ಸಿಎಂಸಿ ಇಂಜಿನಿಯರ್ ನಟರಾಜ್, ಗುತ್ತಿಗೆದಾರ ಉದಯ ಶಿವಕುಮಾರ್ ಅವರುಗಳನ್ನು ಸ್ಥಳಕ್ಕೆ ಕರೆಸಿ ಮಾಹಿತಿ ಪಡೆದ ಸದಸ್ಯರುಗಳು ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಕಿಡಿಕಾರಿದರು.
7.5 ಮೀಟರ್ ಸಿಸಿ ರಸ್ತೆ, 3.5 ಮೀಟರ್ ಫೇವರ್ಸ್ ಹಾಕುತ್ತಿದ್ದು, ಇದರ ಬದಲಾಗಿ 9 ಮೀಟರ್ ಸಿಸಿ ರಸ್ತೆ 2 ಮೀಟರ್ ಫೇವರ್ಸ್ ಹಾಕಬೇಕು. ಮುಂದಿನ ದಿನಗಳಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಲಿದ್ದು, ಲೋಡ್ ವಾಹನಗಳು ಸಂಚರಿಸುವುದರಿಂದ ಫೇವರ್ಸ್ ಕುಸಿಯುವ ಸಾಧ್ಯತೆ ಇದೆ. ಆದ್ದರಿಂದ ಸಿಸಿ ರಸ್ತೆ ಯನ್ನು 9 ಮೀಟರ್ ಗೆ ಹೆಚ್ಚಿಸಬೇಕು, 2 ಮೀಟರ್ ಫೇವರ್ಸ್ ಮಾಡುವುದರಿಂದ ನಿರ್ವಹಣಾ ವೆಚ್ಚವೂ ಕಡಿಮೆಯಾಗಲಿದೆ ಎಂದು ವಿಪಕ್ಷ ನಾಯಕ ಎ.ನಾಗರಾಜ್ ತಾಕೀತು ಮಾಡಿದರು.
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಇಂಜಿನಿಯರ್‌ಗಳ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ದೇವರಮನಿ ಶಿವಕುಮಾರ್, ಗಡಿ ಗುಡಾಳ್ ಮಂಜುನಾಥ್, ಮುಖಂಡರಾದ ಹುಲ್ಮನಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.