ದೊರೆತ ಅವಧಿಯಲ್ಲೇ ಅಭಿವೃದ್ಧಿ ಕೆಲಸ

ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್‌ರಿಗೆ ಹೊನ್ನಾಳಿಯಲ್ಲಿ ಸನ್ಮಾನ

ಹೊನ್ನಾಳಿ, ಜೂ.12- ಇಚ್ಛಾಶಕ್ತಿ ಇದ್ದರೆ ತಮಗೆ ದೊರೆತ ಅವಧಿಯಲ್ಲೇ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯ. ಇದಕ್ಕೆ ಯಾವುದೇ ಅವಧಿ ಮುಖ್ಯವಾಗುವುದಿಲ್ಲ ಎಂಬುದಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ದೀಪಾ ಜಗದೀಶ್ ಹೇಳಿದರು.

ಅವರು ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷ ರಾಗಿ ಹೊನ್ನಾಳಿಗೆ ಮೊದಲ ಬಾರಿಗೆ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ  ಭೇಟಿ ನೀಡಿ ಮಾತನಾಡಿದರು.

ಜಿಲ್ಲೆಯಾದ್ಯಂತ ನೆನೆಗುದಿಗೆ ಬಿದ್ದಿರುವ ವಿವಿಧ ಇಲಾಖೆಗಳಲ್ಲಿನ  ಅಭಿವೃದ್ಧಿ ಕಾರ್ಯಗಳಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರ, ಸದಸ್ಯರ, ಜಿಲ್ಲಾ ಸಂಸದರ, ಜಿಲ್ಲಾ ಮಂತ್ರಿಗಳ ಹಾಗೂ ಜಿಲ್ಲಾ ಶಾಸಕರುಗಳ ಸಲಹೆ ಪಡೆದು ಸಾರ್ವಜನಿಕ ಮೂಲಭೂತ ಸೌಲಭ್ಯಗಳ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದೆಂದರು.

ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತ ನಾಡಿ, ಹೊನ್ನಾಳಿ ಪಟ್ಟಣ ಪಂಚಾಯಿತಿಯನ್ನು ಪುರಸಭೆ ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದ್ದೇವೆ. ಶೇ. 100 ರಷ್ಟು ಈ ಕಾರ್ಯ ಆಗಲಿದೆ ಎಂಬುದಾಗಿ ವಿವರಿಸಿ, ತಮ್ಮ ಪ್ರಯತ್ನದಿಂದ ಉಪವಿಭಾಗಾಧಿಕಾರಿ ಕಚೇರಿ ಆಗಿದೆ. ಅದೇ ರೀತಿ ಈ ಕಾರ್ಯವೂ ನೆರವೇರಲಿದೆ ಎಂದು ಸ್ಪಷ್ಟಪಡಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಂಗಣ್ಣ, ಯಕ್ಕನಹಳ್ಳಿ ಜಗದೀಶ, ತಿಮ್ಮೇನಹಳ್ಳಿ ಚಂದಪ್ಪ ಸೇರಿದಂತೆ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!