ಮುಂಗಾರು 2020: ಕೊರೊನಾ ಗುಂಗಿನಿಂದ ಹೊರ ಬರಲು ಸಕಾಲ

ಕೃಷಿ ಬದುಕಿನಲ್ಲಿ ವಿಳಂಬಕ್ಕೆ ವಿನಾಯಿತಿ ಇಲ್ಲ. ಅನುಭವದ ಹಿನ್ನೆಲೆಯಲ್ಲಿ ಅಸಮರ್ಪಕವಾದುದನ್ನು ಬಿಡುವ, ಸೂಕ್ತವಾದುದನ್ನು ಆಯ್ದುಕೊಳ್ಳುವ ಮನೋಭಾವ ರೂಢಿಸಿಕೊಂಡರೆ ಯಶಸ್ಸು ಸುಲಭ ಸಾಧ್ಯ.

ದಾವಣಗೆರೆ, ಜೂ.12- ಬಹಳಷ್ಟು ಕಡೆ ಕ್ಷೇತ್ರ ವಿಸ್ತರಣಾ ಸೇವೆ ದುರ್ಲಭ ಎನ್ನುವಂತಿದ್ದರೂ, ಕೆಲವು ಕಡೆ ಅದು ಇನ್ನೂ ಉಳಿದುಕೊಂಡಿದೆ. ಆದರೆ, ಅಂತಹ ಕಡೆ ಲಾಭ ಪಡೆಯಲು ಮನಸ್ಸು ಮಾಡುತ್ತಿದ್ದೇವಾ ?  ಕೃಷಿ ಮಾಹಿತಿ ಸಾಕಷ್ಟು ಸುಲಭವಾಗಿ ಸಾಮಾಜಿಕ ಜಾಲಗಳ ಮೂಲಕ ದೊರೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.

ಆದರೆ, ಅದರ ನೈಜ ಲಾಭ ಪಡೆಯುವ ಪ್ರಯತ್ನ ನಡೆಯು ತ್ತಿದೆಯೇ ? ಈ ಅಂಶಗಳನ್ನು ಗಮನಿಸಿದಾಗ, ಸಾಮಾಜಿಕ ಜಾಲಗಳ ಮೂಲಕ ಮಾಹಿತಿ ಪಡೆಯಲು ಪ್ರಯತ್ನ ನಡೆಯುತ್ತಿದೆ. ಇಲ್ಲೂ ಸಹ ಕೃಷಿಕರ ದಾರಿ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಆದುದರಿಂದ, ಆ ಕುರಿತ ಕೆಲ ಎಚ್ಚರಿಕೆಗಳು ಹಾಗೂ ಚಾಲ್ತಿ ಹಂಗಾಮಿಗೆ ಅಗತ್ಯವಾದ ಕೆಲ ಸಲಹೆಗಳನ್ನು ನಿವೃತ್ತ ಕೃಷಿ ಅಧಿಕಾರಿ ಆರ್.ಜಿ. ಗೊಲ್ಲರ್ ನೀಡಿದ್ದಾರೆ.

ಮಾಹಿತಿ ಪಡೆಯುವ ಜಾಲ ತಾಣ ನಂಬಿಕೆಗೆ ಅರ್ಹ ಇರಬೇಕು. ಯಾರೋ ಹೇಳಿದರು ಎಂದು 30 ಕ್ವಿಂಟಾಲ್ ಇಳುವರಿ ಬರುವ ಹತ್ತಿ, 70 ಚೀಲ ಇಳುವರಿ ಬರುವ ಭತ್ತದ ತಳಿಗಳನ್ನು ಹುಡುಕಬೇಡಿ. ಅವು ಇಲ್ಲ ಎಂಬುದು ದಿಟ. ಆದರೂ, ಆ ಬಗ್ಗೆ ಮಾಹಿತಿಯನ್ನು ಸ್ಥಳೀಯ ಸಂಪನ್ಮೂಲ ತಜ್ಞರಿಂದ ಪಡೆಯುವುದು ಸೂಕ್ತ ಎಂದಿದ್ದಾರೆ.

ಪರಂಪರಾಗತ ಬೆಳೆ ಬೆಳೆಯುವಾಗ, ಹೊಸ ವಿಷಯ ಇದ್ದರೆ,  ದಯವಿಟ್ಟು, ಸಂಬಂಧಪಟ್ಟ ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದ ವಾಟ್ಸಾಪ್ ವೇದಿಕೆಗಳಲ್ಲಿ ಲಭ್ಯ ಇರುವ ಮಾಹಿತಿಯನ್ನು ಕೃಷಿಕರೇ ಪಡೆಯಬೇಕು. ಅರೆ ಬರೆ ಆಸಕ್ತಿ ಹೊಂದಿರುವವರ ಮೂಲಕ ಮಾಹಿತಿ ಪಡೆಯುವುದು  ಸಲ್ಲದು. 

ಆಧುನಿಕ ಕೃಷಿ ಮಾಡಬಯಸುವವರು ತಂತ್ರಜ್ಞಾನದ ಮೂಲ ಸಂಸ್ಥೆಗಳನ್ನು ಸಂಪರ್ಕಿಸಿ, ಅವರು ನೀಡಿದ ಮಾಹಿತಿಯನ್ನು ಬಲ್ಲ ಅನುಭವಸ್ಥರಿಂದ ದೃಢಪಡಿಸಿಕೊಂಡು ಮುಂದುವರೆಯಬೇಕು. 

ಆ ನಂತರವೇ ಹಣಕಾಸು ವ್ಯವಹಾರ ಮಾಡಬೇಕು. ವಿಷಾದದ ಸಂಗತಿಯೆಂದರೆ, ಕಳಪೆ ಬೀಜ, ಇತರೆ ಕಳಪೆ ಪರಿಕರ ಮಾರಾಟ ಜಾಲದ ಕೇಡಿಗಳಿಗೆ, ಮೊಬೈಲ್ ವ್ಯವಸ್ಥೆಯನ್ನು ಬಳಸುತ್ತಿರುವ ಹಾಗೂ ಅಲ್ಪ ಹಣದ ಆಸೆಗಾಗಿ ಗ್ರಾಮೀಣ ಯುವ ಪ್ರತಿಭೆಗಳು ತಾವೂ ಆ ಸುಳಿಗೆ ಸಿಗುವುದಲ್ಲದೇ, ಪರಿಚಯದ ಮುಗ್ಧರನ್ನು ವಂಚಕರ ಜಾಲಕ್ಕೆ ಬಲಿಯಾಗಿಸುತ್ತಿದ್ದಾರೆ ಎಂಬ ಸುದ್ದಿ ಇದೆ. 

ಇಂತಹ ಅನಾಹುತಕಾರಿ ಜಾಲಗಳ ಬಗ್ಗೆ ಎಚ್ಚರ ಇರುವುದರೊಂದಿಗೆ, ಪರಿಚಯಸ್ಥರನ್ನು ಎಚ್ಚರಿಸುವ ಮತ್ತು ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ, ಅಧಿಕಾರಿಗಳ ಗಮನಕ್ಕೆ ತರುವುದು ಒಂದು ಪುಣ್ಯದ ಕಾರ್ಯ ಎಂದು ಭಾವಿಸಿ. ಕೆಲ ಸಂದಿಗ್ಧ ಪರಿಕರಗಳನ್ನು (ಉದಾ: ಹಸಿರೆಲೆ ಗೊಬ್ಬರ ಬೀಜ , ಜಿಪ್ಸಂ. ಜಿಂಕ್, ಬೋರಾನ್, ಜೈವಿಕ ಗೊಬ್ಬರ, ಜೈವಿಕ ಪೀಡೆನಾಶಕ…. ಇತ್ಯಾದಿ), ಬಳಸಲು ರಿಯಾಯ್ತಿಗಾಗಿ ಕಾಯದೇ ಸಕಾಲದಲ್ಲಿ ಅವುಗಳನ್ನು ಬಳಸ ಬೇಕು. ಪರಿಕರಗಳ ಖರೀದಿಯನ್ನು ಅಧಿಕೃತ ಮತ್ತು ನಂಬಿಕೆ ಇರುವ ಮಾರಾಟಗಾರರಲ್ಲಿ ಮಾತ್ರ ಮಾಡಬೇಕು ಎಂದಿದ್ದಾರೆ.

ಜೈವಿಕ ಪೀಡೆ ನಾಶಕಗಳನ್ನು ಬೀಜೋಪಚರಿಸಿ ಅಥವಾ ಕೊಟ್ಟಿಗೆ ಗೊಬ್ಬರದೊಡನೆ ಬೆರೆಸಿ ಪೀಡೆಗಳ ಹಾವಳಿ ಕಡಿಮೆ ಮಾಡಬಹುದು. ಬೆಳೆಗಳ ಬಿತ್ತನೆಯನ್ನು ಅವುಗಳ ಬಿತ್ತನೆ ಸಮಯ ತಿಳಿದು ಮಾಡಬೇಕು. 

ಈ ವರ್ಷ ಮಳೆ ಬೇಗ ಆರಂಭವಾಗಿದ್ದು, ಅರೆ ಮಲೆನಾಡು ಪ್ರದೇಶದಲ್ಲಿ ಇನ್ನು ಮುಂದೆ ಹತ್ತಿ, ಹೆಸರು, ಸೋಯಾ ಅವರೆ, ಜೋಳ, ಮೆಕ್ಕೆ ಜೋಳ ಬಿತ್ತನೆ ಮಾಡಿದರೆ ಇಳುವರಿ ಕಡಿಮೆಯಾಗುವುದು, ಕೀಟ/ರೋಗ ಬಾಧೆ ಸಂಭವ ಹೆಚ್ಚು. ಬಯಲು ಸೀಮೆ (ವಲಯ-2-3) ಗಳಲ್ಲಿ ಜೂನ್ 15 ರೊಳಗೆ ಮಾಡಬಹುದು. ಈ ಅಭಿಪ್ರಾಯವನ್ನು ಅನುಭವ ಆಧರಿಸಿ ನೀಡಿದೆ. ಒಂದು ವೇಳೆ, ಪ್ರತಿಕೂಲ ಹವಾಮಾನ ಪರಿಸ್ಥಿತಿ ಉದ್ಭವಿಸಿದರೆ, ಪರ್ಯಾಯ ಕೃಷಿ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಅಕ್ಕಡಿ, ಮಿಶ್ರ, ಸರಪಳಿ ಬೆಳೆ ಪದ್ಧತಿಗಳಿಗೆ ಆದ್ಯತೆ ಇರಲಿ: ಫಾಲ್ ಆರ್ಮಿವರ್ಮ್ ಬಾಧೆ ಹೆಚ್ಚು ಇರುವುದರಿಂದ ಜೋಳ ಮತ್ತು ಮೆಕ್ಕೆಜೋಳದ ಬೀಜಗಳನ್ನು , ಪ್ರತಿ ಕೆಜಿ ಗೆ 3 ಮಿಲೀ ಪ್ರಮಾಣದಲ್ಲಿ ಕ್ಲೋರ್‌ ಪೈರಿಫಾಸ್‌ನಿಂದ (ಅಥವಾ ಲೇಬಲ್ ಕ್ಲೇಮ್ ಇರುವ ರಾಸಾಯನಿಕ)  ಲೇಪನ ಮಾಡಿ ಬಿತ್ತಬೇಕು. ಶೇ. 5 ರ ಮೆಲಾಥಿಯಾನ್ ಹುಡಿಯನ್ನು ಬಿತ್ತನೆ ನಂತರ ಬೆಳೆಯ ಸಾಲುಗಳ ಮೇಲೆ ಉದುರಿಸಬೇಕು. 

ಜೈವಿಕ ಪೀಡೆ ನಾಶಕ ನುಮೊಲೇರಿಯ ರಿಲೈ  ಬಳಸುವ ಕುರಿತು ಸ್ಥಳೀಯ ಸಂಪನ್ಮೂಲ ತಜ್ಞರಲ್ಲಿ ಮಾಹಿತಿ ಪಡೆಯುವುದು ಸೂಕ್ತ ಎಂದಿದ್ದಾರೆ.

ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿಕೊರಕ ಮತ್ತು ಕಾಂಡದ ಮೂತಿ ಹುಳು ಬಾಧೆ ತಡೆಯಲು ಆರಂಭದಲ್ಲಿಯೇ ಕ್ರಮ ಅತ್ಯಗತ್ಯ. ಹುಳು ಬಾಧೆ ಬಂದ ನಂತರ, ಈ ಎರಡೂ ಕೀಟಗಳ ಹತೋಟಿ ಅಸಾಧ್ಯ. ಮೆಕ್ಕೆಜೋಳ, ಈರುಳ್ಳಿ ಮತ್ತು ಮೆಣಸಿನ ಕಾಯಿ ಮಾರುಕಟ್ಟೆ ಮಾಹಿತಿ ಮತ್ತು ಸಂಗ್ರಹಣೆ ಸಾಧ್ಯ ಇಲ್ಲದವರು, ಈ ವರ್ಷ ಆ ಬೆಳೆಗಳ ಕ್ಷೇತ್ರ ಹೆಚ್ಚಿಸದಿರುವುದು ಉತ್ತಮ. ನಂತರದ ಎರಡು ಬೆಳೆಗಳ ಕ್ಷೇತ್ರ ಗಣನೀಯವಾಗಿ ಹೆಚ್ಚುವ ಎಲ್ಲ ಸಾಧ್ಯತೆ ಇರುವುದರಿಂದ ಈ ಸಲಹೆ ಎಂದಿದ್ದಾರೆ.

ಬೆಳೆಗಳ ವಿವಿಧ ಹಂತಗಳಲ್ಲಿ ಮಳೆಯ ವಿತರಣೆ ಬಗ್ಗೆ ಅನುಮಾನಗಳು ಇರುವುದರಿಂದ, ಶಿಫಾರಿತ ಪ್ರಮಾಣದ ಅರ್ಧ ಅಥವಾ ಅದಕ್ಕಿಂತ ಕಡಿಮೆ ಗೊಬ್ಬರ ಬಳಸಿ, ನಂತರ ಮಳೆಯ ಸ್ಥಿತಿಗತಿ ಅವಲಂಬಿಸಿ, ಹಂತ ಹಂತವಾಗಿ ಗೊಬ್ಬರ ಬಳಸಬೇಕು. ನೀರಿನಲ್ಲಿ ಕರಗುವ ಗೊಬ್ಬರಗಳ ಸಕಾಲಿಕ ಸಿಂಪರಣೆ ಅತ್ಯಗತ್ಯ. ಯಾವುದೇ ಬೆಳೆಯ ಆರಂಭದಲ್ಲಿ, ತೇವಾಂಶ ಕೊರತೆಯಾದರೂ ಬೆಳೆ ತಡೆಯಬಹುದು. ಆಗ, ಮಧ್ಯಂತರ ಬೇಸಾಯ, ದಿಂಡು ಏರಿಸುವುದು ಅತ್ಯಗತ್ಯ. ನೀರಾವರಿ ಬೆಳೆಗಳಲ್ಲಿ ನೀರು ಹಾಯಿಸುವ ಸ್ಥಿತಿ ಬಂದರೆ, ಸಾಲು ಬಿಟ್ಟು ಸಾಲು (ಬಾರಿ ಬಿಟ್ಟು ಬಾರಿ), ತೆಳುವಾಗಿ ನೀರು ಹಾಯಿಸಿ.

ಕೀಟ ರೋಗಗಳ ಬಗ್ಗೆ ಸದಾ ನಿಗಾ ಇರಲಿ, ತಕ್ಷಣ ವಾಟ್ಸಾಪ್ ಸಂದೇಶವನ್ನು, ಸಕ್ರಿಯ ವೇದಿಕೆಗೆ ಕಳುಹಿಸಿ ಸಲಹೆ ಪಡೆದು, ಅಂದು ಅಥವಾ ಮರುದಿನ ಪೀಡೆ ನಿರ್ವಹಣಾ ಕ್ರಮ ಕೈಗೊಳ್ಳಬೇಕು. ದೀರ್ಘ ಶುಷ್ಕ ಅವಧಿ ನಂತರ ಮಳೆ ಬಂದ ತಕ್ಷಣ ಮತ್ತು ಅತಿ ವೃಷ್ಟಿ  ಇರುವಾಗ (ಎರಡು ವಾರಕ್ಕೊಮ್ಮೆ)13:0:45 ಅಥವಾ 19:19:19 ಅಥವಾ ತತ್ಸಮಾನ (ನೀರಿನಲ್ಲಿ ಕರಗುವ) ಗೊಬ್ಬರ ಮತ್ತು ಲಘು ಪೋಷಕಾಂಶಗಳ ಸಿಂಪರಣೆ ಮಾಡಬೇಕು. ಮೂಟೆಗಟ್ಟಲೆ ಯೂರಿಯ ಬಳಸಿ ಬೆಳೆ (ಪ್ರಮುಖವಾಗಿ ಮೆಕ್ಕೆಜೋಳ) ಕಳೆದುಕೊಳ್ಳುವ ದುಸ್ಸಾಹಸ ಬೇಡ.

ಸಸಿ ಮಡಿಗಳಲ್ಲಿ ಭತ್ತದ ಬಿತ್ತನೆಯನ್ನು ಜೂನ್ ಮೂರನೇ ವಾರದ ಅಂತ್ಯದೊಳಗೆ ಮಾಡಬೇಕು. ನಂತರ  ತಡವಾದಂತೆ ಇಳುವರಿ ಕಡಿಮೆಯಾಗುವುದು. ಸುಸ್ಥಿರ ಇಳುವರಿಗೆ ಹಸಿರೆಲೆ ಗೊಬ್ಬರ ಮತ್ತು ಸಗಣಿರಾಡಿ ಬಳಕೆ  ಅತ್ಯಗತ್ಯ. ಹೊಲದಲ್ಲಿ ಪರಿಕರ ಬಳಸುವಾಗ ರೈತರ ಉಪಸ್ಥಿತಿ ಅತ್ಯವಶ್ಯ. ಪರಿಕರಗಳನ್ನು ತರುವ ಜವಾಬ್ದಾರಿಯನ್ನು ಬೇರೆಯವರಿಗೆ ನೀಡಬಾರದು . (ಪರಿಕರಗಳನ್ನು ಖರೀದಿಸಿದ ನಂತರ ಬಾಡಿಗೆ ವಾಹನಗಳಲ್ಲಿ ಸಾಗಿಸಬಹುದು) ಎಂದು ಹೇಳಿದ್ದಾರೆ.

ಕೃಷಿ ಬದುಕಿನಲ್ಲಿ ವಿಳಂಬಕ್ಕೆ ವಿನಾಯಿತಿ ಇಲ್ಲ. ಅನುಭವದ ಹಿನ್ನೆಲೆಯಲ್ಲಿ ಅಸಮರ್ಪಕವಾದುದನ್ನು ಬಿಡುವ, ಸೂಕ್ತವಾದುದನ್ನು ಆಯ್ದುಕೊಳ್ಳುವ ಮನೋಭಾವ ರೂಢಿಸಿಕೊಂಡರೆ ಯಶಸ್ಸು ಸುಲಭ ಸಾಧ್ಯ.


– ಆರ್‌.ಜಿ. ಗೊಲ್ಲರ್‌,
ನಿವೃತ್ತ ಕೃಷಿ ಅಧಿಕಾರಿ

error: Content is protected !!