ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಡಾ. ಉಮೇಶ್ ಬಾಬು
ಹರಪನಹಳ್ಳಿ, ಜೂ.11- ಕೇಂದ್ರ ಸರ್ಕಾರದದಿಂದ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್ ಸಾಲದು, ಕನಿಷ್ಟ 300 ಲಕ್ಷ ಕೋಟಿ ಪ್ಯಾಕೇಜ್ ನೀಡಬೇಕಿತ್ತು. ಈ ಹಣ ಕೇವಲ ಘೋಷಣೆಯಾಗಿಯೇ ಉಳಿದಿದೆ ಎಂದು ಕಾಂಗ್ರೆಸ್ ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಡಾ. ಉಮೇಶ್ ಬಾಬು ಹೇಳಿದರು.
ಪಟ್ಟಣದ ಅಹಿಂದ ಕಛೇರಿಯಲ್ಲಿ ಇಂದು ತಮ್ಮನ್ನು ಭೇಟಿಯಾದ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.
ಕೋವಿಡ್-19 ಇಡೀ ವಿಶ್ವವನ್ನೇ ತಲ್ಲಣ ಗೊಳಿಸಿದ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ವತಿಯಿಂದ 25 ಸಾವಿರ ಡಾಕ್ಟರ್ಸ್ ಮತ್ತು ನರ್ಸ್‍ಗಳಿಗೆ ಕೋವಿಡ್ ತರಬೇತಿ ನೀಡಲಾಗಿದೆ. ಅವರೆಲ್ಲರೂ ಉತ್ತಮ ಸೇವೆ ಸಲ್ಲಿಸಿದ್ದು, ಇವರ ಶ್ರಮದಿಂದ ಸಮಾಜಕ್ಕೆ ಉತ್ತಮ ಪ್ರತಿಫಲ ಸಿಕ್ಕಂತಾಗಿದೆ ಎಂದ ಅವರು ಹೇಳಿದರು.
ಹರಪನಹಳ್ಳಿ ತಾಲ್ಲೂಕಿನಲ್ಲಿ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಡಾ. ಭೀಮಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರಾಶ್ರಿತರಿಗೆ, ಕಡು ಬಡವರಿಗೆ ಉಚಿತ ಆಹಾರವನ್ನು ವಿತರಿಸಲಾಗಿದೆ. ತಾಲ್ಲೂಕಿನ ಅಹಿಂದ ಪರಿಷತ್‌ನಿಂದ ಕೈಲಾದಷ್ಟು ಧನಸಹಾಯ ಮಾಡಿದ್ದೇವೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಪದಗ್ರಹಣ ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲಾ ಕಾಂಗ್ರೆಸ್ ಮುಖಂಡ ರೊಂದಿಗೆ ಚರ್ಚಿಸಿದ್ದೇವೆ. ಪ್ರತಿ ಗ್ರಾಮ ಪಂಚಾಯಿತಿ ವತಿಯಿಂದ ನೂರಕ್ಕೂ ಹೆಚ್ಚು ಜನರನ್ನು ಕಳಿಸುವ ಗುರಿ ಇದೆ ಎಂದರು.
ರಾಜ್ಯಕ್ಕೆ ಇಲ್ಲಿಯವರೆಗೆ ಬಿಡುಗಡೆ ಯಾದ ಹಣ ಎಷ್ಟು ಎಂಬುದು ಬಿಜೆಪಿ ಯವರಿಗೆ ತಿಳಿದಿಲ್ಲ. ಸಮಾಜದ ಅನೇಕ ಹಿಂದುಳಿದ ಹಾಗೂ ದಿನಗೂಲಿ ನೌಕರರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುವುದೇ ಇವರ ಸಾಧನೆಯಾಗಿದೆ. ಕೆಪಿಸಿಸಿ ಹಿಂದುಳಿದ ವರ್ಗದ ಅಧ್ಯಕ್ಷ ಲಕ್ಷ್ಮಿನಾರಾಯಾಣ ಅವರಿಗೆ ಎಂ.ಎಲ್.ಸಿ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಸದಸ್ಯ ತಿಪ್ಪನಾಯಕನಹಳ್ಳಿ ತಿಮ್ಮಣ್ಣ, ಹಾರಾಳು ಕೊಟ್ರೇಶ್, ಗೌರಳ್ಳಿ ರಮೇಶ್, ಬಸವರಾಜ್ ವೈ.ಆರ್, ಪಕ್ಕೀರಪ್ಪ, ಮಂಜಪ್ಪ, ತಿಮ್ಮಣ್ಣ, ಹೆಚ್. ಮಂಜುನಾಥ್, ಕೊಟ್ರೇಶ್ ಸೇರಿದಂತೆ ಇತರರು ಇದ್ದರು.