ಭೋವಿ ಸಮಾಜದಿಂದ ಸಿಎಂಗೆ ಪತ್ರ
ದಾವಣಗೆರೆ, ಜೂ.10- ಭೋವಿ, ಲಂಬಾಣಿ, ಕೊರಚ ಮತ್ತು ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದು, ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ಭೋವಿ ಸಮಾಜದ ಮುಖಂಡರೂ ಆದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಮೂಲಕ ಅಂಚೆ ಮುಖೇನ ಪತ್ರ ಚಳುವಳಿಯನ್ನು ಇಂದು ನಡೆಸಲಾಯಿತು.
ನಗರದ ಲಕ್ಷ್ಮಿ ವೃತ್ತದ ಬಳಿಯ ಮುಖ್ಯ ಅಂಚೆ ಕಚೇರಿಯಲ್ಲಿ ಅಂಚೆ ಡಬ್ಬಕ್ಕೆ ಪತ್ರ ಹಾಕುವ ಮೂಲಕ ಹಿಂದುಳಿದ ಸಮಾಜಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಪತ್ರ ಚಳುವಳಿ ಆರಂಭಿಸಲಾಗಿದೆ.
ಅತ್ಯಂತ ಕಡು ಬಡತನ ಮತ್ತು ಅಸಂಘಟಿತ ರಾದ ಭೋವಿ, ಲಂಬಾಣಿ, ಕೊರಚ ಮತ್ತು ಕೊರಮ ಸಮಾಜಗಳಿಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸ್ವಾತಂತ್ರ್ಯ ಪೂರ್ವ ದಲ್ಲೇ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ಕಲ್ಪಿಸಿದ್ದಾರೆ. ಆದರೆ ಕೆಲವರು ಈ ಸಮಾಜಗಳನ್ನು ಎಸ್ ಸಿ ಪಟ್ಟಿಯಿಂದ ಕೈ ಬಿಡಲು ಹುನ್ನಾರವನ್ನು ಸತತವಾಗಿ ನಡೆಸಿ ಕೊಂಡು ಬರುತ್ತಿದ್ದಾರೆ. ಸಂವಿಧಾನ ವಿರೋಧಿ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಅಂಚೆ ಪತ್ರ ಬರೆಯುವ ಮೂಲಕ ಮನವಿ ಮಾಡಲಾಗಿದೆ ಎಂದು ಬಸವರಾಜ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭೋವಿ ಸಮಾಜದ ಮುಖಂಡರಾದ ಹೆಚ್. ಚಂದ್ರಪ್ಪ, ಡಿ. ದೇವರಾಜ್, ಆರ್. ಶ್ರೀನಿವಾಸ, ತಿಪ್ಪೇಶಿ, ಉಮೇಶ್, ಆರ್. ಸುರೇಶ್, ವೈ. ತಿಮ್ಮೇಶ್, ಎಂ. ಅಶೋಕ, ವೈ. ನಾರಾಯಣ್, ಗೊಲ್ಲರಹಳ್ಳಿ ಶಾಂತ ರಾಜ್, ಹೆಚ್. ನಾಗರಾಜ, ಗಿರಿಧರ್, ಸೋಮ ಶೇಖರ್, ಈ. ರುದ್ರೇಶ್, ಡಿ. ಕೇಶವಮೂತಿ೯, ಹೆಚ್. ಜಯ್ಯಣ್ಣ ಸೇರಿದಂತೆ ಇತರರು ಇದ್ದರು.