ದಾವಣಗೆರೆ, ಜೂ.10- ಮಹಾಮಾರಿ ಕೊರೊನಾ ಸೋಂಕು ಭೀತಿಯಿಂದಾಗಿ ದೇಶಾದ್ಯಂತ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮದಿಂದಾಗಿ ಮುಚ್ಚಲ್ಪಟ್ಟಿದ್ದ ದೇವಸ್ಥಾನ, ಚರ್ಚ್, ಮಸೀದಿ ದರ್ಗಾಗಳನ್ನು ಇದೇ ದಿನಾಂಕ 8 ರಿಂದ ಪುನರ್ ಪ್ರಾರಂಭಿಸಿ, ಭಕ್ತಾದಿಗಳಿಗೆ ಮುಕ್ತ ಅವಕಾಶ ನೀಡಿದ್ದು, ವಕ್ಫ್ ಬೋರ್ಡ್ ವತಿಯಿಂದ ನೀಡಿರುವ ಸೂಚನೆಗಳು ಮಸೀದಿಗಳ ಸಮಿತಿ ಹಾಗೂ ನಮಾಜ್ಗಳಲ್ಲಿ ಗೊಂದಲ ನಿರ್ಮಾಣ ಮಾಡಿವೆ.
ದೇಶದಲ್ಲಿ ಲಾಕ್ಡೌನ್ ಘೋಷಣೆಯಾದ ನಂತರ ಪ್ರಾರ್ಥನಾ ಮಂದಿರಗಳಲ್ಲಿ ವಕ್ಫ್ ಬೋರ್ಡ್ ವತಿಯಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಒಂದು ಮಸೀದಿಯಲ್ಲಿ ಐದು ಜನರು ಮಾತ್ರ ಪ್ರಾರ್ಥನೆ ಸಲ್ಲಿಸಬೇಕು. ರಂಜಾನ್ ಮಾಸ ಇರುವುದರಿಂದ ಮನೆಗಳಲ್ಲಿ ರೋಜಾ ಇಪ್ತೇಯಾರಿ ಮಾಡಬೇಕು. ಕಡಿಮೆ ಡೆಸಿಬಲ್ನಲ್ಲಿ ಧ್ವನಿವರ್ಧಕ ಬಳಸಬೇಕು. ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬಾರದು ಸೇರಿದಂತೆ, ಇನ್ನು ಕೆಲವು ನಿಬಂಧನೆಗಳನ್ನು ವಿಧಿಸಲಾಗಿತ್ತು.
ಅದರಂತೆ ನಗರದ ಎಲ್ಲಾ ಮಸೀದಿಗಳಲ್ಲಿಯೂ ಸಹ ಸರ್ಕಾರದ ಈ ಆದೇಶವನ್ನು ಪರಿಪಾಲಿಸಲಾಯಿತು. ಆದರೆ ಜೂನ್ 8 ರಿಂದ ಮುಕ್ತ ಅವಕಾಶ ನೀಡಿತ್ತಾದರೂ, ಮಸೀದಿಗಳ ಸಮಿತಿಯವರಿಗೆ ನೀಡಿರುವ ಸೂಚನೆಗಳು ಈಗ ಮಸೀದಿಯ ಪೇಷ್ ಇಮಾಂ, ನಮಾಜಿ ಪ್ರಾರ್ಥನೆಗಳಲ್ಲಿ ಸಮಿತಿಯ ಸದಸ್ಯರಲ್ಲಿ ಗೊಂದಲ ನಿರ್ಮಾಣ ಮಾಡಿದೆ.
ರಾಜ್ಯ ವಕ್ಫ್ ಮಂಡಳಿ ಮಾರ್ಗಸೂಚಿಗಳು :
- ನಮಾಜ್ಗಳು ಮನೆಯಿಂದ ವಜೂ ಮಾಡಿಕೊಂಡು ಬರಬೇಕು.
- ಜಾನಿಮಾಜ್ (ಕಾರ್ಪೆಟ್) ಮನೆಯಿಂದಲೇ ತರಬೇಕು.
- ಮಸೀದಿಯಲ್ಲಿ ಫರ್ಜ್ ನಮಾಜ್ ಮಾತ್ರ ಸಲ್ಲಿಸಬೇಕು. ಸುನ್ನತ್ ಮತ್ತು ನಪೀಲ್ ನಮಾಜ್ ಮನೆಯಲ್ಲಿ ಸಲ್ಲಿಸಬೇಕು.
- ಮಸೀದಿಗಳಲ್ಲಿ ಕಡ್ಡಾಯವಾಗಿ ಟೋಪಿ, ಟವೆಲ್ ತೆರವುಗೊಳಿಸಬೇಕು.
- ನಮಾಜಿಗಳು ಮಾಸ್ಕ್ ಹಾಕಿಕೊಳ್ಳಬೇಕು, ಸ್ಯಾನಿಟೈಜರ್ ಬಳಸಬೇಕು.
- ಮಸೀದಿಗಳಲ್ಲಿರುವ ಶೌಚಾಲಯ ಹಾಗೂ ವಜೂಖಾನ್ ಮುಚ್ಚಬೇಕು.
- 10 ವರ್ಷದ ಒಳಗೆ 60 ವರ್ಷ ಮೇಲ್ಪಟ್ಟವರಿಗೆ ಮಸೀದಿಗಳಲ್ಲಿ ಪ್ರವೇಶ ನಿರ್ಬಂಧ
- ಶುಕ್ರವಾರದ ಜುಮ್ಮಾ ನಮಾಜ್ ಮೂರು ಹಂತಗಳಲ್ಲಿ ಅರ್ಧ ಗಂಟೆಗೊಮ್ಮೆ , ಉದಾ : 1-15, 1-30, 2 ಗಂಟೆಗೆ ಸಾಮಾಜಿಕ ಅಂತರ ಕಾಪಾಡಬೇಕು.
- ಉಸಿರಾಟದ ತೊಂದರೆ ಇರುವವರು ಮಸೀದಿಗೆ ಪ್ರವೇಶ ಮಾಡಬಾರದು. ಉಷ್ಣಾಂಶ ಪರಿಶೀಲನೆ ಮಾಡಿಸಿಕೊಳ್ಳಬೇಕು.
- ರಾತ್ರಿ ಇಷಾ ನಮಾಜ್ ನಂತರ ಮಸೀದಿ ಆವರಣದಲ್ಲಿ ಸ್ಯಾನಿಟೈಜರ್ ಬಳಸಿ ಸ್ವಚ್ಛತೆಗೊಳಿಸಬೇಕು.
- ದರ್ಗಾಗಳಲ್ಲಿಯೂ ಸಹ ಇದೇ ರೀತಿ ಮಾರ್ಗಸೂಚಿಗಳನ್ನು ಅನುಸರಿಸಬೇಕು.
ಈ ಸಂಬಂಧ ನಿನ್ನೆ ಸಭೆ ಸೇರಿ ವಕ್ಫ್ ಸಮಿತಿಯ ಸೂಚನೆಗಳ ಬಗ್ಗೆ ಉಲೇಮಾಗಳು ಒಂದು ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ವಿವರಿಸಿದ ವಕ್ಫ್ ಅಧ್ಯಕ್ಷ ಸಿರಾಜ್ ಅಹ್ಮದ್ ಅವರು, ರಾಜ್ಯ ವಕ್ಫ್ ಇಲಾಖೆಯಿಂದ ಬಂದಿರುವ ಆದೇಶವನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದೇವೆ ಎಂದು ಹೇಳಿದರು.
ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ನೀಡಿರುವ ಸೂಚನೆ ಮೇರೆಗೆ ಮಸೀದಿಗಳಲ್ಲಿ 2 ಮೀಟರ್ ಅಂತರದಲ್ಲಿ ನಮಾಜಿಗಳು ಪ್ರಾರ್ಥನೆ ಸಲ್ಲಿಸಲು ತಿಳಿಸಿದೆ. ಅದರಂತೆ ಗುರುತುಗಳನ್ನು ಮಾಡಲಾಗಿದೆ. ಮಾಸ್ಕ್ ಬಳಕೆ ಹಾಗೂ ಸ್ಯಾನಿಟೈಜರ್ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಂಜೀಮ್ ಸಮಿತಿ ಮಾಜಿ ಉಪಾಧ್ಯಕ್ಷ ಹೆಚ್. ಶಫೀಉಲ್ಲಾ ವಿವರಿಸಿದರು.
ಪ್ರತಿಕ್ರಿಯೆ : ರಾಜ್ಯ ವಕ್ಫ್ ಮಂಡಳಿ, ಜಿಲ್ಲಾ ವಕ್ಫ್ ಸಮಿತಿ ತೆಗೆದುಕೊಂಡಿರುವ ಕ್ರಮ ಸರ್ಕಾರ ಮಟ್ಟದಲ್ಲಿ ಸರಿಯಿದೆ. ಆದರೆ, ಷರಿಯತ್ ಪ್ರಕಾರ ಇದು ಸಮಂಜಸವಲ್ಲ ಎಂದು ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಮುಖಂಡ ಅಲ್ಲಾವಲ್ಲಿ ಸಮೀಉಲ್ಲಾ ಸಾಬ್ ಅವರು, ಈ ಸಂಬಂಧ ರಾಜ್ಯಾದ್ಯಂತ ಉಲೇಮಾಗಳು ಸಭೆ ಸೇರಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಮಾರ್ಗಸೂಚಿಗಳನ್ನು ಸಭೆಯಲ್ಲಿ ವಿವರಿಸಿದ್ದು, ಎಲ್ಲಾ ಮಸೀದಿಗಳ ಸಮಿತಿಯವರಿಗೆ ನೀಡಲಾಗಿದೆ. ಸರ್ಕಾರದ ಆದೇಶವನ್ನು ಪಾಲಿಸಲು ಮಸೀದಿಗಳ ಬಳಿ ಫ್ಲೆಕ್ಸ್ ಅಳವಡಿಸಲು ತಿಳಿಸಲಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಮೌಜಮ್ ಪಾಷ ಅವರು ತಿಳಿಸಿದರು.