ಎಡೆಯೂರಿನ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ನೂತನ ಚಿನ್ನದ ರಥಕ್ಕೆ ಚಾಲನೆ

ಎಡೆಯೂರು ಕ್ಷೇತ್ರ, ಜೂ. 8- ಕ್ಷೇತ್ರದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ನೂತನ ಚಿನ್ನದ ರಥವನ್ನು ಸಂಪ್ರೋಕ್ಷಿಸಿ, ಪೂಜಿಸಿ ರಂಭಾಪುರಿ ಪೀಠದ  ಶ್ರೀ ಡಾ. ವೀರಸೋಮೇಶ್ವರ ಜಗದ್ಗುರುಗಳು ಚಾಲನೆ ನೀಡಿದರು.

ನಂತರ ಆಶೀರ್ವಚನ ನೀಡಿದ ಜಗದ್ಗುರುಗಳು, ದೇವರು, ಧರ್ಮ ಗುರುವಿನಲ್ಲಿ ಅಪಾರ ಭಕ್ತಿ ಇಟ್ಟು ಕೊಂಡ ಮೂಲ ಎಡೆಯೂರಿನ ಶ್ರೀಮತಿ ರುದ್ರಾಣಮ್ಮ ಮತ್ತು ತೋಂಟದಾರ್ಯ ದಂಪತಿ ಹಾಗೂ ಮಕ್ಕಳು ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ರಥವನ್ನು ನಿರ್ಮಿಸಿ, ಸಮರ್ಪಿಸಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಕಡು ಬಡತನ ದಲ್ಲಿ ಹುಟ್ಟಿ ಬೆಳೆದ ತೋಂಟದಾರ್ಯ ಅವರು ತಮ್ಮ ಶ್ರಮ ಮತ್ತು ಸಾಧನೆಯ ಮೂಲಕ ಅಪಾರ ಸಂಪತ್ತನ್ನು ಗಳಿಸಿಕೊಂಡಿದ್ದಾರೆ. ತಾವು ನಂಬಿ ನಡೆದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗೆ ಚಿನ್ನದ ರಥ ಸಮರ್ಪಿಸಿ, ತಮ್ಮ ಸಂಕಲ್ಪವನ್ನು ಪೂರೈಸಿದ ಶ್ರೇಷ್ಠ ಭಕ್ತರಾಗಿದ್ದಾರೆ ಎಂದು ಹೇಳಿದ ಶ್ರೀಗಳು, ತೋಂಟದಾರ್ಯ ಕುಟುಂಬ ವರ್ಗದವ ರನ್ನು ಶಾಲು ಹೊದಿಸಿ, ಸನ್ಮಾನಿಸಿ ಶುಭ ಹಾರೈಸಿದರು. 

ಬಾಳೆಹೊನ್ನೂರು ಖಾಸಾ ಎಡೆಯೂರು ಮಠದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. 

ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ – ಉಪವಿಭಾಗಾಧಿಕಾರಿ ಶ್ರೀಮತಿ ಲಕ್ಷ್ಮಿ, ಪಾರುಪತ್ತೆದಾರ ಸುರೇಶ್, ಪ್ರಧಾನ ಆಗಮಿಕ ಶಿವಮೂರ್ತಯ್ಯ, ದಾಸೋಹ ಸಮಿತಿ ಸದಸ್ಯ ತಿಪಟೂರಿನ ಶಿವಸ್ವಾಮಿ, ದೇವಸ್ಥಾನ ಸಮಿತಿ ಸದಸ್ಯ ಇಂಗಳೇಶ್ವರ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!