ದಾವಣಗೆರೆ, ಜೂ.8- ಕಳೆದ ಕೆಲವು ತಿಂಗಳಿನಿಂದ ಸ್ಥಗಿತವಾಗಿರುವ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನವನ್ನು ಈ ಕೂಡಲೇ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಖಿಲ ಭಾರತ ಯುವ ಜನ ಫೆಡರೇಷನ್ ಜಿಲ್ಲಾ ಸಮಿತಿಯು ಇಂದು ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ರಾಜ್ಯವು ಕೊರೊನಾ ಸಂಕಷ್ಟದಲ್ಲಿ ಸಿಲುಕಿದೆ. ಬಡವರ ಬದುಕು ನಾಶವಾಗಿದೆ. ಸರ್ಕಾರ ನೀಡುತ್ತಿದ್ದ ಅಲ್ಪ ಪ್ರಮಾಣದ ಮಾಸಿಕ ವೇತನ ನಂಬಿಕೊಂಡು ಹಲವಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ, ಕಳೆದ ಕೆಲವು ದಿನಗಳಿಂದ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ಬಂದಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಆದ್ದರಿಂದ ಸರ್ಕಾರ ವೇತನ ಪಾವತಿಗೆ ಕ್ರಮವಹಿಸಬೇಕು. ಸವಿತಾ ಸಮಾಜ, ಮಡಿವಾಳ ಹಾಗೂ ಇತರೆ ಸಮಾಜಗಳಿಗೆ ಘೋಷಿಸಿರುವ ಆರ್ಥಿಕ ನೆರವನ್ನು ಪಡೆದು ಕೊಳ್ಳಲು ಸೂಕ್ತ ಸರಳ ಕ್ರಮ ಅನುಸರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಟ್ಟಡ ಕಾರ್ಮಿಕರಿಗೆ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ಸಹಾಯ ಧನ ಎಲ್ಲಾ ಕಾರ್ಮಿಕರಿಗೂ ಅವರವರ ಖಾತೆಗೆ ಹಾಕಬೇಕೆಂದು ಸರ್ಕಾರ ಅಧಿಕಾರಿಗಳಿಗೆ ತುರ್ತು ನಿರ್ದೇಶನ ಕೊಡಬೇಕು. ಡಿಎಲ್ ಇದ್ದ ಚಾಲಕರಿಗೆ 5 ಸಾವಿರ ಕೊಡಬೇಕು. ಮಂಡಕ್ಕಿ ಭಟ್ಟಿ ಕಾರ್ಮಿಕರಿಗೆ ಐದು ಸಾವಿರ ಸಹಾಯ ಧನ, ಅಗತ್ಯ ವಸ್ತುಗಳ ಕಿಟ್, ಕಟ್ಟಡ ಕಾರ್ಮಿಕರಿಗೆ ವೈದ್ಯಕೀಯ ವೆಚ್ಚ ಸಹಾಯ ಧನ ಪಾವತಿಗೆ ವಿಳಂಬ ಮಾಡಬಾರದೆಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಆವರಗೆರೆ ವಾಸು, ರಾಜು ಕೆರನಹಳ್ಳಿ, ತಿಪ್ಪೇಶ್, ಗದಿಗೇಶ್, ಹೆಚ್. ಹನು ಮಂತಪ್ಪ, ಲೋಹಿತ್, ರುದ್ರೇಶ್, ಫಜುಲ್, ಅಂಜಿನಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು.