ಮಲೇಬೆನ್ನೂರು, ಜೂ.8- ಕೊರೊನಾ ಲಾಕ್ಡೌನ್ನಿಂದಾಗಿ ಎರಡೂವರೆ ತಿಂಗಳ ಬಳಿಕ ಸೋಮವಾರ ದೇವಸ್ಥಾನ, ಮಸೀದಿ ಮತ್ತು ಚರ್ಚ್ಗಳು ಅಧಿಕೃತವಾಗಿ ಓಪನ್ ಆದವು. ಮಲೇಬೆನ್ನೂರು ಪಟ್ಟಣ ಸೇರಿದಂತೆ ಹೋಬಳಿಯ ಎಲ್ಲಾ ಹಳ್ಳಿಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಯಿತು.
ಆದರೆ, ಮೊದಲ ದಿನ ನಿರೀಕ್ಷಿತ ಪ್ರಮಾಣದಲ್ಲಿ ಭಕ್ತರು ಕಂಡು ಬರಲಿಲ್ಲ. ಅಷ್ಟೇ ಅಲ್ಲ ಮಸೀದಿಗಳಲ್ಲೂ ಪ್ರಾರ್ಥನೆ ಮಾಡಲು ಬರುವವರ ಸಂಖ್ಯೆ ಕ್ಷೀಣವಾಗಿತ್ತು. ಇದಕ್ಕೆ ಪ್ರಮುಖ ಕಾರಣ ಕೊರೊನಾ ವೈರಸ್ ಭೀತಿ ಎನ್ನಲಾಗಿದೆ.
ಸರ್ಕಾರ ಲಾಕ್ಡೌನ್ ಸಡಿಲಿಕೆಯ ನಾನಾ ಹಂತಗಳಲ್ಲಿ ದೇವಸ್ಥಾನಗಳ ಪ್ರಾರಂಭಕ್ಕೂ ಅನುಮತಿ ನೀಡುವುದರ ಜೊತೆಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಿದೆ. ಅದರಂತೆ ಸೋಮವಾರ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಹಣ್ಣು-ಕಾಯಿ ಇಲ್ಲದೆ ದೇವರ ದರ್ಶನಕ್ಕೆ ಮಾತ್ರ ಬಂದಿದ್ದರು. ಕಾಲು ತೊಳೆದುಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆದರು.
ಡಿವೈಎಸ್ಪಿ ಭೇಟಿ: ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ದರ್ಶನಕ್ಕೆ ಭಕ್ತರು ಆಗಮಿಸಿದ್ದರು.
ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರ ಧ್ವಜ, ಮಲೇಬೆನ್ನೂರು ಪಿಎಸ್ಐ ವೀರಬಸಪ್ಪ ಅವರು ಕೂಡಾ ದೇವಸ್ಥಾನಕ್ಕೆ ಭೇಟಿ ನೀಡಿ, ಭಕ್ತರ ಪ್ರವೇಶಕ್ಕೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು.
ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ಅವರು ಕೋವಿಡ್-19 ಹಿನ್ನೆಲೆಯಲ್ಲಿ ದೇವಸ್ಥಾನದಿಂದ ಕೈಗೊಂಡ ಕ್ರಮಗಳನ್ನು ವಿವರಿಸಿದರು.
ಉಪ ತಹಶೀಲ್ದಾರ್ ಭೇಟಿ: ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನ, ಕುಂಬಳೂರಿನ ಹನುಮಂತ ದೇವರ ದೇವಸ್ಥಾನ ಮತ್ತು ಮಲೇಬೆನ್ನೂರು ಪಟ್ಟಣದ ಬಸವೇಶ್ವರ, ಕಾಶಿ ವಿಶ್ವನಾಥ, ಏಕನಾಥೇಶ್ವರಿ ದೇವಸ್ಥಾನಗಳಿಗೆ ಉಪ ತಹಶೀಲ್ದಾರ್ ರವಿ ಅವರು ಭೇಟಿ ನೀಡಿ, ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಅರ್ಚಕರಿಗೆ ಹಾಗೂ ದೇವಸ್ಥಾನಗಳ ಆಡಳಿತ ಮಂಡಳಿಗೆ ಸೂಚನೆ ನೀಡಿದರು.
ಕಂದಾಯ ನಿರೀಕ್ಷಕ ಸಮೀರ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ಪುರಸಭೆಯ ಆರೋಗ್ಯಾಧಿಕಾರಿ ಗುರುಪ್ರಸಾದ್, ಪರಿಸರ ಇಂಜಿನಿಯರ್ ಉಮೇಶ್ ಈ ವೇಳೆ ಹಾಜರಿದ್ದರು.