ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಕೇಳಿ ಬಂದ ಅಭಿಪ್ರಾಯ
ದಾವಣಗೆರೆ, ಜೂ. 8 – ಕೊರೊನಾ ಜೊತೆಗೇ ಬದುಕಬೇಕಿರುವುದರಿಂದ ಸ್ವಯಂ ರಕ್ಷಣೆಯ ಹೊಣೆ ಜನರಿಗೇ ಸೇರಿದ್ದು ಎಂದು ಸರ್ಕಾರ ಹೇಳಿರುವ ರೀತಿಯಲ್ಲೇ, ರಸ್ತೆಗೆ ಬರುವ ಜನರ ಸುರಕ್ಷತೆ ಅವರ ವರಿಗೇ ಸೇರಿದ್ದು ಎಂಬ ನಿರ್ಧಾರ ತೆಗೆದುಕೊಳ್ಳಬೇಕು…
ಹೀಗೊಂದು ಅಭಿಪ್ರಾಯ ಕೇಳಿ ಬಂದಿದ್ದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯಲ್ಲಿ.
ವಿದ್ಯಾರ್ಥಿಗಳು ದ್ವಿಚಕ್ರಗಳಲ್ಲಿ ಹೆಲ್ಮೆಟ್ ಇಲ್ಲದೇ ತ್ರಿಬ್ಬಲ್ ರೈಡಿಂಗ್‌ನಲ್ಲಿ ಟ್ಯೂಷನ್‌ಗಳಿಗೆ ಹೋಗುತ್ತಾರೆ. ಇವರಿಗೆ ಅಪ್ಪ – ಅಮ್ಮನ ಬೆಂಬಲವಿದೆ. ರೈತರು ಟ್ರ್ಯಾಕ್ಟರ್‌ಗಳಿಗೆ ರಿಫ್ಲೆಕ್ಟರ್ ಹಾಕದೇ ಜೀವಗಳಿಗೆ ಅಪಾಯ ತರುತ್ತಿದ್ದಾರೆ, ಕೇಳಿದರೆ ನಾವು ರೈತರು ಎಂದು ಸಮರ್ಥನೆ ನೀಡುತ್ತಾರೆ. ದ್ವಿಚಕ್ರ ವಾಹನ ಸವಾರರು ಹೆದ್ದಾರಿಗಳ ಮಧ್ಯಭಾಗದಲ್ಲೇ ಹೋಗುತ್ತಾ ತಮ್ಮ ಜೀವಕ್ಕೆ ತಾವೇ ಅಪಾಯ ತಂದುಕೊಳ್ಳುತ್ತಿದ್ದಾರೆ ಎಂದು ರಸ್ತೆ ಸುರಕ್ಷತಾ ಸಮಿತಿ ಸದಸ್ಯರು ಕಳವಳ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ರಾಜೀವ್, ಬೈಕ್ ಸವಾರರು ದಂಡಕ್ಕೆಂದು 500 ರೂ. ಕೊಡುತ್ತಿದ್ದಾರೆಯೇ ಹೊರತು, ಹೆಲ್ಮೆಟ್ ಹಾಕುತ್ತಿಲ್ಲ. ನಗರದಲ್ಲಿ ಈಗ ಕೊರೊನಾ ಇದೆ. 45 ಪೊಲೀಸ್ ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಕಂಟೈನ್‌ಮೆಂಟ್ ವಲಯಗಳ ಮೇಲೆ ನಿಗಾ ವಹಿಸಬೇಕಿದೆ. ಇದೆಲ್ಲದರ ನಡುವೆ ಸಂಚಾರ ನಿಯಂತ್ರಣ ಹೊರೆಯಾಗುತ್ತಿದೆ ಎಂದು ತಿಳಿಸಿದರು.
ಬೈಕ್ ಸವಾರರು ದಂಡಕ್ಕೆಂದು 500 ರೂ. ಕೊಡುತ್ತಾರೆಯೇ ಹೊರತು, ಹೆಲ್ಮೆಟ್ ಹಾಕುತ್ತಿಲ್ಲ.
ಎಂ.ರಾಜೀವ್, ಹೆಚ್ಚುವರಿ ಎಸ್ಪಿ
ಮಣ್ಣು ಬೇರೆಯವರದು, ಹೆಸರು ಸ್ಮಾರ್ಟ್ ಸಿಟಿದು : ಶಿರಮಗೊಂಡನಹಳ್ಳಿ ರಸ್ತೆಯ ಬದಿ ಸ್ಮಾರ್ಟ್ ಸಿಟಿ ಯೋಜನೆಯ ಕಟ್ಟಡ ತ್ಯಾಜ್ಯವನ್ನು ಸುರಿಯಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಆಕ್ಷೇಪಿಸಿದರು. ಈ ಬಗ್ಗೆ ಉತ್ತರಿಸಿದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಈ ಮಣ್ಣು ನಮ್ಮ ದಲ್ಲ. ಬೇರೆ ಕಟ್ಟಡ ಕಾಮಗಾರಿಯವರು ಮಣ್ಣು ಸುರಿಯುತ್ತಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಗೆ ಬೇರೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಸ್ಕಿಡ್ ಮಾಡುವ ರಾಗಿ ಹುಲ್ಲು : ರೈತರು ಒಕ್ಕಣೆ ಮಾಡಲು ಫಸಲನ್ನು ರಸ್ತೆಗೆ ಹಾಕುತ್ತಿದ್ದಾರೆ. ಇದರಿಂದಾಗಿ ವಾಹನಗಳಿಗೆ ಅಪಾಯ ಎದುರಾಗುತ್ತಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ತಿಳಿಸಿದರು. ಇದಕ್ಕೆ ಅನುಮೋ ದಿಸಿದ ಆರ್‌ಟಿಒ ಎನ್.ಜೆ. ಬಣಕಾರ್, ನಾನೂ ತೊಂದರೆ ಅನುಭ ವಿಸಿದ್ದೇನೆ. ನನ್ನ ಕಾರೂ ರಾಗಿ ಹುಲ್ಲಿಗೆ ಸಿಲುಕಿ ಸ್ಕಿಡ್ ಆಗಿತ್ತು ಎಂದರು. ಈ ರೀತಿ ಬೀದಿಗೆ ಒಕ್ಕಣೆ ಮಾಡಲು ಹಾಕುವ ಮಾಲನ್ನು ಜಪ್ತಿ ಮಾಡಿ ಕೊಳ್ಳಬೇಕು. ಈ ಬಗ್ಗೆ ಸಂಬಂಧಿಸಿದ ಪೊಲೀಸ್ ಠಾಣೆಗಳು ಕ್ರಮ ತೆಗೆದು ಕೊಳ್ಳಲು ತಿಳಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆರ್‌ಟಿಒ ಎನ್.ಜೆ. ಬಣಕಾರ್, ಕೊರೊನಾ ಸಂದರ್ಭದಲ್ಲಿ ನಿಮ್ಮ ಜೀವಕ್ಕೆ ನೀವೇ ಜವಾಬ್ದಾರಿ ವಹಿಸಬೇಕು ಎಂದು ತಿಳಿಸಲಾಗಿದೆ. ಅದೇ ರೀತಿ, ರಸ್ತೆಯಲ್ಲಿ ನಿರ್ಲಕ್ಷ್ಯ ತೋರಿದರೆ ಸಾಯುವವರು ಅವರೇ. ಎಲ್ಲವನ್ನೂ ಅಧಿಕಾರಿಗಳು ಹಾಗೂ ಪೊಲೀಸರೇ ನಿಭಾಯಿಸಲು ಸಾಧ್ಯವಾಗದು. ರಸ್ತೆಗೆ ಬರುವ ಜನರ ಜೀವವನ್ನು ಅವರೇ ಕಾಯ್ದುಕೊಳ್ಳಬೇಕು ಎಂದರು.
ಬಣಕಾರ್ ಅವರ ಮಾತಿಗೆ ಸುರಕ್ಷತಾ ಸಮಿತಿಯ ಸದಸ್ಯರೂ ಸಹ ಹೌದು ಎಂದು ದನಿಗೂಡಿಸಿದರು.
ಶಾಮನೂರಿನಿಂದ ಲಕ್ಷ್ಮಿ ಫ್ಲೋರ್ ಮಿಲ್‌ಗೆ ಬರುವ ರಸ್ತೆಗಳಿಗೆ ಡಿವೈಡರ್ ಹಾಕಬೇಕು, ವಿದ್ಯಾರ್ಥಿ ಭವನದಿಂದ ಲಕ್ಷ್ಮಿ ಫ್ಲೋರ್ ಮಿಲ್‌ವರೆಗಿನ ರಸ್ತೆಯಲ್ಲಿ ಬೀದಿ ದೀಪ ನಿರ್ವಹಿಸಬೇಕು, ಕೆ.ಆರ್. ರಸ್ತೆಯ ಫುಟ್‌ಪಾತ್ ತೆರವು ಮಾಡಬೇಕು, ಹೆದ್ದಾರಿಗಳಲ್ಲಿ ಇಂಟರ್‌ಸೆಪ್ಟರ್ ಅಳವಡಿಸಬೇಕು ಎಂಬುದೂ ಸೇರಿದಂತೆ ಹಲವಾರು ಸಲಹೆಗಳು ಸಭೆಯಲ್ಲಿ ಕೇಳಿ ಬಂದವು.
ಸಭೆಯಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್, ಖಾಸಗಿ ಬಸ್ ಮಾಲೀಕರ ಸಂಘದ ಕಾರ್ಯದರ್ಶಿ ಎಂ.ಆರ್.ಸತೀಶ್, ಖಜಾಂಚಿ ಹೆಚ್.ಸಿ. ಮಹೇಶ್, ಆಟೋ ಮಾಲೀಕರ ಸಂಘದ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ತ್ರಿಚಕ್ರ ವಾಹನಗಳ ಸಂಘದ ಅಧ್ಯಕ್ಷ ಪಳನಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.