ಜಗಳೂರು, ಜೂ.8- ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ವಿ. ರಾಮಚಂದ್ರ ಅವರ ವಿರುದ್ಧ ಮಾಜಿ ಶಾಸಕರು ಹಾಗೂ ಚುನಾವಣಾ ಪ್ರತಿಸ್ಪರ್ಧಿಯಾಗಿದ್ದ ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಅವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾಖಲಿಸಿದ್ದ ಚುನಾವಣಾ ತಕರಾರು ಅರ್ಜಿ ವಜಾಗೊಂಡಿರುವುದರಿಂದ ಇಂದು ಬಿ.ಜೆ.ಪಿ. ಕಾರ್ಯಕರ್ತರು, ಅಭಿಮಾನಿಗಳು ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್
ಅಭ್ಯರ್ಥಿಯಾಗಿದ್ದ ಮಾಜಿ ಶಾಸಕರಾಗಿದ್ದ ಹೆಚ್.ಪಿ. ರಾಜೇಶ್ ಅವರು ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಪರಿಶಿಷ್ಟ ಪಂಗಡದ `ನಾಯಕ’ ಜಾತಿಯವರೇ ಅಲ್ಲ. ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ. ಅವರ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ, ಚುನಾವಣೆಯಲ್ಲಿ `ನನ್ನನ್ನು ವಿಜೇತ’ ಎಂದು ಘೋಷಿಸಬೇಕೆಂದು ರಾಜ್ಯ ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.
ಸುದೀರ್ಘ ಸುಮಾರು ಎರಡು ವರ್ಷಗಳ ವಿಚಾರಣೆ ನಂತರ ಇಂದು ನ್ಯಾಯಾಲಯವು ಹೆಚ್.ಪಿ. ರಾಜೇಶ್ ಅವರ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಿದೆ ಎಂದು ವಕೀಲರು, ಬಿಜೆಪಿ ಮಾಜಿ ಅಧ್ಯಕ್ಷ ಡಿ.ವಿ. ನಾಗಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಅಧ್ಯಕ್ಷ ಬಿದರಕೆರೆ ರವಿಕುಮಾರ್, ಯುವ ಮುಖಂಡರಾದ ಬಿಸ್ತುವಳ್ಳಿ ಬಾಬು, ಸೂರಲಿಂಗಪ್ಪ, ಕೆ.ಎಸ್. ಪ್ರಭು, ಮಹೇಶ್, ಕಸ್ತೂರಿಪುರ ಶಿವಣ್ಣ, ತಾ.ಪಂ. ಸದಸ್ಯರಾದ ಶಂಕರನಾಯ್ಕ, ಪ.ಪಂ. ಸದಸ್ಯ ಆರ್. ತಿಪ್ಪೇಸ್ವಾಮಿ, ಪಾಪಲಿಂಗಪ್ಪ, ಎಪಿಎಂಸಿ ಸದಸ್ಯ ಸೂರಡ್ಡಿಹಳ್ಳಿ ಶರಣಪ್ಪ, ಸೇರಿದಂತೆ ಪ.ಪಂ., ತಾ.ಪಂ. ಸದಸ್ಯರು ಸೇರಿದಂತೆ ನೂರಾರು ಜನ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸಂತಸವಾಗಿದೆ; ಶಾಸಕ ಎಸ್.ವಿ.ಆರ್ : ಪ್ರತಿ ಚುನಾವಣೆಯಲ್ಲೂ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. 2018ರ ಚುನಾವಣೆಯಲ್ಲೂ ಹಳ್ಳಿ-ಹಳ್ಳಿಗೂ ಹೋಗಿ ನಾನು `ನಾಯಕ’ ಎಸ್.ಟಿ. ಅಲ್ಲ ಎಂದು ಅಪಪ್ರಚಾರ ಮಾಡಿದ್ದರೂ, ಜನ ನನ್ನನ್ನು 29 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿ ಜನತಾ ನ್ಯಾಯಾಲಯದಲ್ಲಿ ಜಯ ಸಿಕ್ಕಿತ್ತು. ಇಂದು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನನಗೆ ಜಯ ಸಿಕ್ಕಿದೆ. ತೀರ್ಪಿನಿಂದ ಸಂತಸವಾಗಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ `ಜನತಾವಾಣಿ’ಗೆ ಪ್ರತಿಕ್ರಿಯಿಸಿದರು.