ಹೋಟೆಲ್ನಲ್ಲಿ ರುಚಿ ರುಚಿ ಅಡುಗೆ ಸವಿದ ಗ್ರಾಹಕರು
ದಾವಣಗೆರೆ, ಜೂ.8- ಬಹುದಿನ ಗಳಿಂದ ದೇವನಗರಿಯಲ್ಲಿ ಬಾಗಿಲು ಮುಚ್ಚಿದ್ದ ದೇವಾಲಯಗಳು ಇಂದು ಮತ್ತೆ ಬಾಗಿಲು ತೆರೆದವು. ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಭಕ್ತರಿಗೆ ಪ್ರವೇಶ ನೀಡಲಾಯಿತು.
ದೇವಸ್ಥಾನದ ಪ್ರವೇಶ ದ್ವಾರದಲ್ಲಿಯೇ ಭಕ್ತರ ಕೈಗಳಿಗೆ ಸ್ಯಾನಿಟೈಸರ್ ಹಾಕಿ ಒಳ ಬಿಡಲಾಗುತ್ತಿತ್ತು. ಮಂಗಳಾರತಿ ಮಾತ್ರ ಮಾಡಲಾಗುತ್ತಿತ್ತು. ತೀರ್ಥ, ಪ್ರಸಾದ ಇರಲಿಲ್ಲ. ಭಕ್ತರು ಹಣ್ಣು, ಕಾಯಿ ತಂದರೆ ವಾಪಾಸ್ ಕಳುಹಿಸಲಾಗುತ್ತಿತ್ತು. ಮಾಸ್ಕ್ ಇಲ್ಲದೆ ಬರುತ್ತಿದ್ದ ಭಕ್ತರಿಗೂ ಪ್ರವೇಶವಿರಲಿಲ್ಲ. ಇನ್ನು ಹಳೇಪೇಟೆಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲೂ ಭಕ್ತರು ಶ್ರೀಸ್ವಾಮಿಯ ದರ್ಶನ ಪಡೆದರು.
ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಇಷ್ಟು ದಿನಗಳ ಕಾಲ ದೇವಸ್ಥಾನದಲ್ಲಿ ಭಕ್ತರ ಪ್ರವೇಶ ನಿರಾಕರಿಸಲಾಗಿದೆ. ಇದೀಗ ಮತ್ತೆ ಭಕ್ತರಿಗೆ ಪ್ರವೇಶ ಕಲ್ಪಿಸಿರುವುದು ಸಂತಸ ತಂದಿದೆ. ನಾವೂ ಆದಷ್ಟು ಜಾಗರೂ ಕತೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ದುರ್ಗಾಂಬಿಕಾ ದೇವಿ ದೇವಸ್ಥಾನದ ಅರ್ಚಕರುಗಳಾದ ಚನ್ನೇಶ್, ಜೀವನ್, ವಿಶ್ವಾರಾಧ್ಯ ಹೇಳಿದರು.
ಶ್ರೀ ಮಾರ್ಕಂಡೇಶ್ವರ ದೇವಸ್ಥಾನದ ಲ್ಲಿಯೂ ಸರ್ಕಾರದ ನಿಯಮಾವಳಿಗಳ ಪ್ರಕಾರ ಭಕ್ತರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು. ಪದ್ಮಶಾಲಿ ಸಮಾಜದ ಅಧ್ಯಕ್ಷ ಪಿ.ಜೆ. ನಾಗರಾಜ್ ಅವರು, ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ. ತೀರ್ಥ, ಪ್ರಸಾದ ನೀಡುತ್ತಿಲ್ಲ. ಸದ್ಯಕ್ಕೆ ಯಾವುದೇ ವಿಶೇಷ ಪೂಜೆಗಳನ್ನು ನಡೆಸುತ್ತಿಲ್ಲ ಎಂದು ಹೇಳಿದರು. ಕಾರ್ಯದರ್ಶಿ ಪರಶುರಾಮ್ ಹಾಗೂ ಅರ್ಚಕರು ಈ ಸಂದರ್ಭದಲ್ಲಿದ್ದರು.
ದುಗ್ಗಮ್ಮನ ದರ್ಶನ ಪಡೆದ ಡಿಸಿ, ಪ್ರಭಾ ಮಲ್ಲಿಕಾರ್ಜುನ್ : ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಹಲವರು ದೇವಿ ದರ್ಶನ ಪಡೆದುಕೊಂಡರು. ಈ ಸಂದರ್ಭ ದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಕೊರೊನಾ ಎಂಬ ಯುದ್ಧದಲ್ಲಿ ಮುಂಬರುವ ದಿನಗಳಲ್ಲಿ ಯುದ್ಧ ಎದುರಿಸುವ ಶಕ್ತಿಯನ್ನು ದಯ ಪಾಲಿಸುವಂತೆ ನಗರದೇವತೆ ಬಳಿ ಬೇಡಿಕೊಂಡಿದ್ದಾಗಿ ಹೇಳಿದರು. ಸರ್ಕಾರದ ಮಾರ್ಗಸೂಚಿಯಂತೆ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶ ನೀಡಲಾಗಿದೆ. ತೀರ್ಥ, ಪ್ರಸಾದ ವಿತರಿಸದೆ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದರು.
ಹಗೇದಿಬ್ಬ ವೃತ್ತದ ಬಳಿ ಇರುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾ ನನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಭಕ್ತರು ದೇವರ ದರ್ಶನ ಪಡೆದರು.
ಹೋಟೆಲ್ಗಳು ಚಾಲೂ : ಇಡ್ಲಿ, ವಡಾ, ಚಡ್ನಿ, ಸಾಂಬಾರ್, ದೋಸೆ, ಪೂರಿ-ಸಾಗು, ಪಲಾವ್ ಹೋಳಿಗೆ ಊಟ… ಅಬ್ಬಾ ಅದೆಷ್ಟು ದಿನಗಳಾಗಿತ್ತೋ ಎಂಬಂತೆ ಗ್ರಾಹಕರು ಇಂದು ಬಾಯಿ ಚಪ್ಪರಿಸಿ ಸವಿದರು. ನಗರದಲ್ಲಿ ಹೋಟೆಲ್ಗಳನ್ನು ತೆರೆಯಲು ಅನುಮತಿ ನೀಡಿದ್ದರಿಂದ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡಿ ಹೋಟೆಲ್ಗಳನ್ನು ಆರಂಭಿಸಲಾಗಿತ್ತು. ಬೆಳಿಗ್ಗೆಯೇ ರುಚಿ ರುಚಿಯಾದ ತಿಂಡಿಗಳು ಹೋಟೆೆಲ್ಗಳಲ್ಲಿ ಸಿದ್ಧವಾಗಿದ್ದವು. ಮಧ್ಯಾಹ್ನದ ಚಪಾತಿ, ರೊಟ್ಟಿ, ಹೋಳಿಗೆ ಊಟ ನೀಡಿ ಗ್ರಾಹಕರ ಹಸಿವು ನೀಗಿಸಿದವು.
ಬಹುದಿನಗಳ ನಂತರ ಹೋಟೆಲ್ ಆರಂಭವಾಗಿದ್ದರಿಂದ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಇಂದಷ್ಟೇ ಹೋಟೆಲ್ ಗಳು ಆರಂಭವಾಗಿವೆ. ಮುಂದಿನ ದಿನಗಳಲ್ಲಿ ಗ್ರಾಹಕರ ಸಂಖ್ಯೆ ಹಂತ ಹಂತವಾಗಿ ಹೆಚ್ಚಾಗುವ ನಿರೀಕ್ಷೆ ಇರುವುದಾಗಿ ಅಪೂರ್ವ ಹೋಟೆಲ್ ಮಾಲೀಕ ಅಣಬೇರು ರಾಜಣ್ಣ ಹೇಳಿದರು.
ಇಡ್ಲಿ, ವಡಾ ತಿಂದು ಅದೆಷ್ಟೋ ದಿನಗಳಾದಂತಿತ್ತು. ಕೆಲ ಹೋಟೆಲ್ಗಳಲ್ಲಿ ಪಾರ್ಸಲ್ ಕೊಡುತ್ತಿದ್ದರಾದರೂ ಕುಳಿತು ತಿಂದಷ್ಟು ಸಮಾಧಾನವಾಗುತ್ತಿರಲಿಲ್ಲ. ಹೋಟೆಲ್ ಆರಂಭವಾಗುವುದನ್ನು ಕಾಯುತ್ತಿದ್ದೆವು. ಇಂದು ಮನದಣಿಯೆ ತಿಂದು ಖುಷಿಯಾಗಿದೆ ಎಂದು ನಿಟುವಳ್ಳಿಯ ಶಿವಮೂರ್ತಿ ಸಂತಸ ಹಂಚಿಕೊಂಡರು. ಹೋಟೆಲ್ಗಳಲ್ಲೂ ಸಹ ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಟೇಬಲ್ಗಳಿಗೆ ಇಬ್ಬರು ಕೂರಲು ಮಾತ್ರ ಅವಕಾಶವಿತ್ತು.