ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಬಸವರಾಜ್ ಶಿವಗಂಗಾ ಆಶಯ
ಚನ್ನಗಿರಿ, ಜೂ.6- ಜೂನ್ ತಿಂಗಳೆಂದರೆ ಅದಕ್ಕೆ ಒಂದು ವಿಶೇಷತೆ ಇದೆ. ರೈತರಿಗೂ ಹಾಗೂ ಪರಿಸರ ಪ್ರೇಮಿಗಳಿಗೆ ಸಂತಸದ ತಿಂಗಳು. ವಿಶ್ವ ಪರಿಸರ ದಿನಾಚರಣೆ, ಮುಂಗಾರು ಆರಂಭವಾಗಿ ಬಿತ್ತುವ ಕಾರ್ಯ ಜೂನ್ ತಿಂಗಳಲ್ಲಿ ನಡೆಯುತ್ತದೆ. ಹೀಗಾಗಿ ಈ ತಿಂಗಳು ನಮಗೆ ವಿಶೇಷವಾದದ್ದು ಎಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಅಧ್ಯಕ್ಷ ಬಸವರಾಜ್ ವಿ. ಶಿವಗಂಗಾ ಅಭಿಪ್ರಾಯ ಪಟ್ಟರು.
ಪರಿಸರದ ಮಹತ್ವ ತಿಳಿದುಕೊಳ್ಳಬೇಕು. ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದ ಮಹತ್ತರವಾದ ದಿನ ಎಂದು ಅವರು ಹೇಳಿದರು.
ಮಾನವ ಪರಿಸರದ ಶಿಶು. ಪರಿಸರವಿಲ್ಲದೇ ಮಾನವನ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವು ದಿಲ್ಲ. ಆದ್ದರಿಂದಲೇ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ, ಅನಿವಾರ್ಯತೆ ಎರಡೂ ಇದೆ. ಆರೋಗ್ಯವಾಗಿರಬೇಕೆಂದರೆ ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿರಬೇಕು. ಅರಣ್ಯ ಸಂಪತ್ತಿನ ಸಮೃದ್ಧಿ ದೇಶದ ಅಭಿವೃದ್ದಿ ಸಂಕೇತ ಎಂದು ಬಸವರಾಜ್ ಅಭಿಪ್ರಾಯಪಟ್ಟರು.
ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಮಲಹಾಳು ಗ್ರಾಮಕ್ಕೆ ಭೇಟಿ ನೀಡಿ ಜನರಲ್ಲಿ ಬಸವರಾಜ್ ಅವರು ಪರಿಸರದ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆ ಆವರಣದಲ್ಲಿ ಸಸಿ ನೆಟ್ಟು ನೀರು ಹಾಕಿದರು. ಮನೆಗೊಂದು ಮರ ಊರಿಗೆ ಒಂದು ವನ ಇದ್ದರೆ ಸುಂದರ ಪರಿಸರ ಕಾಣಬಹುದು. ಆಧುನೀಕರಣ, ಕೈಗಾರಿಕೀರಣದಿಂದ ಕಾಂಕ್ರೀಟ್ ನಾಡಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಡು ನಶಿಸಿ ಹೋಗುತ್ತಿದ್ದು, ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಮಳೆ ಕಡಿಮೆಯಾಗುತ್ತಿರುವುದರಿಂದ ಅಂತರ್ಜಲ ಕ್ಷೀಣಿಸುತ್ತಿದ್ದು, ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲಿ ಅರಣ್ಯ ಸಂಪತ್ತು ಸಮೃದ್ಧಿಯಾಗಿರುತ್ತದೆ ಯೋ ಅಲ್ಲಿ ಮಳೆ – ಬೆಳೆ ಕೂಡ ಚೆನ್ನಾಗಿರುತ್ತದೆ. ಪ್ರತಿಯೊಬ್ಬರೂ ಮರ ಬೆಳೆಸಬೇಕು. ಅರಣ್ಯ ಸಂಪತ್ತನ್ನು ಉಳಿಸುವಂತಹ ಕೆಲಸ ಮಾಡಬೇಕು. ವಿಶ್ವ ಪರಿಸರ ದಿನವನ್ನು ಸಂಪ್ರ ದಾಯದ ಹಬ್ಬದಂತೆ ಆಚರಣೆ ಮಾಡಿ, ಪರಿಸರ ರಕ್ಷಣೆ ಮಾಡಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಶಾರದಮ್ಮ, ಗ್ರಾಮದ ಮುಖಂಡರಾದ ಶಶಿಕುಮಾರ್, ಅಂಜಿನಪ್ಪ, ತಿಪ್ಪೇಶ್, ಗ್ರಾ.ಪಂ. ಉಪಾಧ್ಯಕ್ಷ ಮೂರ್ತಪ್ಪ ಹಾಗೂ ಮಂಜುನಾಥ್, ಮೆದಿಕೆರೆ ವಿಜಯ ಕುಮಾರ್, ಯಾದವ ಸಮುದಾಯದ ಮುಖಂಡ ಪ್ರವೀಣ್ ಉಪಸ್ಥಿತರಿದ್ದರು.