ದಾವಣಗೆರೆ, ಜೂ.6- ಕೆಟಿಜೆ ನಗರದ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದ ಕಾಮಗಾರಿ ಮುಂದುವರೆಸಲು ಹಾಗೂ ಮೂಲಭೂತ ಸೌಲಭ್ಯಕ್ಕೆ ಅನುದಾನ ನೀಡುವಂತೆ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಎಸ್ಸಿ ವಿಭಾಗದ ಕಾರ್ಯದರ್ಶಿ ಸೋಮಲಾಪು ರದ ಹನುಮಂತಪ್ಪ ಪಾಲಿಕೆಗೆ ಮನವಿ ಮೂಲಕ ಒತ್ತಾಯಿಸಿದ್ದಾರೆ.
ಶೇ.24.10 ಅನುದಾನ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅನುದಾನ ದಲ್ಲಿ ನೆಲ ಅಂತಸ್ತು ಹಾಗೂ ಮೊದಲನೇ ಮಹಡಿಯ (ಭೋಜನಾಲಯ) ಕಾಮಗಾರಿ ಪೂರ್ಣಗೊಂಡಿದ್ದು, 2ನೇ ಮಹಡಿಯಲ್ಲಿ ಅತಿಥಿಗಳಿಗೆ ವಾಸ್ತವ್ಯ ಹೂಡಲು ಕೊಠಡಿಗಳ ಕಾಮಗಾರಿಗೆ 35 ಲಕ್ಷಗಳನ್ನು ಹಾಗೂ ಮೂಲಭೂತ ಸೌಲಭ್ಯಕ್ಕಾಗಿ ಫೈಬರ್ ಛೇರ್, ಊಟದ ಟೇಬಲ್ ಹಾಗೂ ಪಾತ್ರೆ ಸಾಮಾ ನುಗಳನ್ನು ನೀಡಲು ಶೇ.24.10ರ ಅನುದಾನ ನೀಡಬೇಕೆಂದು ಕೋರಿದ್ದಾರೆ.
ಸದರಿ ಕಾಮಗಾರಿಗೆ 2005ನೇ ಇಸವಿಯಲ್ಲಿ ಅಡಿಗಲ್ಲು ಹಾಕಿದ್ದು, ಪಾಲಿಕೆ ಯಿಂದ ಇದೇ ಅನುದಾನದಲ್ಲಿ ಕೇವಲ 5 ಅಥವಾ 10 ಲಕ್ಷ ರೂಪಾಯಿಗಳನ್ನು ಮಾತ್ರ ನೀಡುತ್ತಾ ಬಂದಿರುವ ಕಾರಣ ಕಾಮಗಾರಿಯು ವಿಳಂಬವಾಗಿದೆ. ಆದರೆ ಈ ಬಾರಿ ಅನುದಾನ ಮಂಜೂರು ಮಾಡುವ ಮೂಲಕ ಸಮುದಾಯ ಭವನದ ಕಾಮಗಾರಿ ಸಂಪೂರ್ಣವಾಗಿಸಲು ಸಹಕರಿಸಬೇಕೆಂದು ಪಾಲಿಕೆ ಮಹಾಪೌರ ಅಜಯ್ಕುಮಾರ್ ಅವರಿಗೆ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಎಸ್.ಮಾನು, ಹಾವೇರಿ ದುರುಗೇಶ್ ಇನ್ನಿತರರು ಮನವಿ ಸಲ್ಲಿಸಿದರು.