ಹರಪನಹಳ್ಳಿ, ಜೂ.6- ನಗರೀಕರಣ, ರಸ್ತೆ ಅಗಲೀಕರಣ ಎಂಬ ನೆಪವೊಡ್ಡಿ ನಮ್ಮ ಪರಿಸರ ಸಂಪತ್ತನ್ನು ನಾವೇ ಹಾಳು ಮಾಡುತ್ತಿದ್ದೇವೆ. ಮುಂದಿನ ಪೀಳಿಗೆಗೆ ಪರಿಸರ ಉಳಿಸದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಅಡವಿಹಳ್ಳಿ ಕ್ರಾಸ್ ಬಳಿ ಇರುವ ಅಗ್ನಿಶಾಮಕ ದಳದ ನೂತನ ಕಚೇರಿಯಲ್ಲಿ ಟಿ.ಎಂ. ಶಿವಶಂಕ್ರಯ್ಯ ಸ್ಮಾರಕ ಟ್ರಸ್ಟ್. ಅಗ್ನಿಶಾ ಮಕ ದಳ ಅರಣ್ಯ ಇಲಾಖೆಯವರ ಸಂಯುಕ್ತಾ ಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಟ್ಟು ಬಳಿಕ ಮಾತನಾಡಿ, ಒಂದು ವೃಕ್ಷ ಮಾನವ ಬಿಟ್ಟ ಕಾರ್ಬನ್ ಡೈ ಆಕ್ಸೈಡನ್ನು 40 ವರ್ಷ ತನ್ನೊಡ ಲೊಳಗೆ ಹುದುಗಿಸಿಕೊಂಡು ನಿರಂತರ ಅದನ್ನು ಆಮ್ಲಜನಕವನ್ನಾಗಿ ಮಾಡು ತ್ತದೆ. ಪ್ರತಿಯೊಬ್ಬರು ಪ್ರಕೃತಿಯ ಮನೋಹರ ವಾದ ಸೊಬಗನ್ನು ರಕ್ಷಿಸಿ ಉಳಿಸಿ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ವಲಯ ಅರಣ್ಯಾಧಿಕಾರಿ ಡಿ. ಭರತ್ ಮಾತ ನಾಡಿ, ದೈಹಿಕ ಶ್ರಮವಿಲ್ಲದೆ ಮನುಷ್ಯನ ಸರಾಸರಿ ಆಯುಷ್ಯ ಕಡಿಮೆಯಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ., ಪ್ರತಿಯೊಬ್ಬರು ತಮ್ಮ ಹುಟ್ಟು ಹಬ್ಬ, ಮದುವೆ, ಹಬ್ಬಗಳ ನೆಪ ಮಾಡಿಕೊಂಡು ಒಂದು ಗಿಡ ನೆಟ್ಟು ಸಾಕಿದರೆ ಪರಿಸರ ರಕ್ಷಣೆ ಮಾಡಿದಂತಾಗುತ್ತದೆ. ನಮ್ಮ ಇಲಾಖೆಯಿಂದ ಶಾಲಾ-ಕಾಲೇಜುಗಳು, ನ್ಯಾಯಾಲಯ, ಸರ್ಕಾರಿ ಕಚೇರಿಗಳು ಸೇರಿದಂತೆ ವಿವಿಧೆಡೆ ಗಿಡಗಳನ್ನು ಕೊಡುತ್ತೇವೆ. ಸಾರ್ವಜನಿಕರು ಗಿಡ ತೆಗೆದುಕೊಂಡು ಅವುಗಳನ್ನು ಲಾಲನೆ ಪಾಲನೆ ಮಾಡದಿದ್ದರೆ ಪ್ರಯೋಜನೆ ಇಲ್ಲ ಎಂದರು.
ತೆಗ್ಗಿನ ಮಠದ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ಹಾಗೂ ಟಿ.ಎಂ. ಶಿವಶಂಕ್ರಯ್ಯ ಮಾತನಾಡಿ, ಅಗ್ನಿಶಾಮಕ ದಳದ ನೂತನ ಕಚೇರಿಯ ಸುತ್ತ ಉತ್ತಮ ಮಣ್ಣು ಇಲ್ಲ. ನಾವು ಕಳೆದ 15 ದಿವಸಗಳಿಂದ 10 ಅಡಿಯಷ್ಟು ಆಳವಾಗಿ ಮಣ್ಣು ತೆಗೆದು ಗುಂಡಿ ಮಾಡಿ ಉತ್ತಮವಾದ ಮಣ್ಣು ಹಾಗೂ ಬತ್ತಿ ಸೊಪ್ಪು ಹಾಕಿ ಗುಂಡಿ ಸಿದ್ದತೆ ಮಾಡಿದ್ದೇವೆ. ಆವರಣದಲ್ಲಿ ತೆಂಗು, ರಕ್ತ ಚಂದನ ಸೇರಿದಂತೆ, ವಿವಿಧ ಬಗೆಯ 200 ಸಸಿಗಳನ್ನು ನೆಟ್ಟಿದ್ದೇವೆ. ಪ್ರಮುಖವಾಗಿ ತೆಂಗು 2 ವರ್ಷದಲ್ಲಿ ಕಾಯಿ ಬಿಡಲು ಶುರುವಾಗುತ್ತದೆ. ಸಸಿಗಳನ್ನು ಅಗ್ನಿಶಾಮಕ ದಳದವರು ಚೆನ್ನಾಗಿ ಸಾಕಬೇಕು ಎಂದರು.
ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್, ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿಗಳಾದ ಎಸ್. ರವಿ ಪ್ರಸಾದ್, ಜಯರಾಂ, ಹರಪನಹಳ್ಳಿ ಅಗ್ನಿಶಾಮಕ ದಳದ ಅಧಿಕಾರಿ ರಾಮಪ್ಪ. ಎಚ್.ಕೆ. ಹಡಗಲಿ, ಅಗ್ನಿಶಾಮಕ ದಳದ ಅಧಿಕಾರಿ ರವಿಕುಮಾರ್, ಪಿ.ಎಸ್.ಐ. ಪ್ರಕಾಶ್ ಸೇರಿದಂತೆ ಇತರರು ಇದ್ದರು.