ದಾವಣಗೆರೆ, ಜೂ. 7 – ನಗರದಲ್ಲಿ ಕೊರೊನಾ ವಾರಿಯರ್ಸ್‌ಗೆ ಮತ್ತೆ ಸೋಂಕಿನ ಆಘಾತ ಸಿ.ಜಿ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿ ರುವ ನಾಲ್ವರು ಸ್ಟಾಫ್ ನರ್ಸ್ ಹಾಗೂ ಇಬ್ಬರು ಅಟೆಂಡರ್‌ಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಈ ಹಿಂದೆ ಕೊರೊನಾಗೆ ಚಿಕಿತ್ಸೆ ನೀಡುತ್ತಿರುವ ಸಿ.ಜಿ. ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಹೆಲ್ತ್ ವರ್ಕರ್ ಒಬ್ಬರಿಗೆ ಸೋಂಕು ಬಂದಿತ್ತು. ಅವರ ಮೂಲಕ ಇನ್ನಿಬ್ಬರು ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಸೋಂಕು ಬಂದಿತ್ತು.
ಇದಕ್ಕೂ ಮುಂಚೆ ಬಾಷಾ ನಗರದ ನರ್ಸ್ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು ಹಾಗೂ ಮೊನ್ನೆಯಷ್ಟೇ ಇಬ್ಬರು ನೇತ್ರ ವೈದ್ಯರಲ್ಲಿ ಕೊರೊನಾ ಸೋಂಕಿರುವುದು ಕಂಡು ಬಂದಿತ್ತು.
ಇದರ ಬೆನ್ನಲ್ಲೇ ಸಿ.ಜಿ. ಆಸ್ಪತ್ರೆಯ ಸಿಬ್ಬಂದಿ ಯಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿರುವುದು ಕಳವಳಕ್ಕೆ ಕಾರಣವಾಗಿದೆ. ಒಟ್ಟು ಆರು ಕೊರೊನಾ ವಾರಿಯರ್‌ಗಳಲ್ಲಿ ಸೋಂಕಿರುವುದು ಖಚಿತವಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಭಾನುವಾರ ಸೋಂಕು ಕಾಣಿಸಿಕೊಂಡ ಆರು ಜನ ಆಸ್ಪತ್ರೆಯ ಸಿಬ್ಬಂದಿ ಕೊರೊನಾ ಸೋಂಕಿರುವವರಿಗೆ ಚಿಕಿತ್ಸೆ ನೀಡಿರಲಿಲ್ಲ. ಇವರು ಆಸ್ಪತ್ರೆಯ ಬೇರೆ ವಿಭಾಗಗಳಲ್ಲಿ ಕೆಲಸ ಮಾಡಿದವರಾಗಿದ್ದಾರೆ. ಇವರಿಗೆ ಯಾವ ರೀತಿ ಸೋಂಕು ತಗುಲಿದೆ ಎಂಬುದನ್ನು ಇನ್ನೂ ಪತ್ತೆ ಮಾಡಲಾಗುತ್ತಿದೆ. ಆರೋಗ್ಯ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 17 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 23 ಜನರನ್ನು ಗುರುತಿಸಲಾಗಿದೆ.
ಭಾನುವಾರದಂದು ಜಿಲ್ಲೆಯ ಒಟ್ಟು 17 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.
ಇವರಲ್ಲಿ, ಇತ್ತೀಚೆಗೆ ನಿಧನರಾದ ಬಸವರಾಜ ಪೇಟೆಯ 83 ವರ್ಷದ ವೃದ್ಧೆಯ ಜೊತೆ ಸಂಪರ್ಕ ಹೊಂದಿದ್ದ ಅವರ ಕುಟುಂಬದ ಐವರೂ ಸೇರಿದ್ದಾರೆ.
ಇಬ್ಬರಿಗೆ ಕಂಟೈನ್‌ಮೆಂಟ್ ವಲಯವೊಂದರ ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ ಸಂಖ್ಯೆ 1247 ಸಂಪರ್ಕದಿಂದ ಮೂವರಿಗೆ ಸೋಂಕು ಬಂದಿದೆ. 3637 ಹಾಗೂ 4839 ಸಂಪರ್ಕದಿಂದ ಇನ್ನಿಬ್ಬರಿಗೆ ಸೋಂಕು ಬಂದಿದೆ. ಐವರಿಗೆ ಸಂಪರ್ಕ ಯಾವ ರೀತಿ ತಗುಲಿದೆ ಎಂಬುದನ್ನು ಇನ್ನೂ ಪತ್ತೆ ಮಾಡಲಾಗುತ್ತಿದೆ.