ಹರಪನಹಳ್ಳಿ ತಾ.ಪಂ. ಅಧ್ಯಕ್ಷೆ ಅನ್ನಪೂರ್ಣಮ್ಮ ವಿರೋಧ
ಹರಪನಹಳ್ಳಿ, ಜೂ.7- ಮಕ್ಕಳ ಹಿತದೃಷ್ಠಿಯಿಂದ ಆನ್ಲೈನ್ ಪಾಠ ಬೇಡ. ಮೊಬೈಲ್, ಕರೆನ್ಸಿ ಎಂದು ವಿದ್ಯಾರ್ಥಿಗಳು ದುಶ್ಟಟಕ್ಕೆ ಬೀಳುತ್ತಾರೆ. ಒಂದು ವರ್ಷ ಓದುವುದನ್ನು ಬಿಟ್ಟರೆ ಏನೂ ಆಗಲ್ಲ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಅನ್ನಪೂರ್ಣಮ್ಮ ವಿರೋಧ ವ್ಯಕ್ತ ಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿಯ ರಾಜೀವ್ ಗಾಂಧಿ ಸಭಾ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, 10ನೇ ತರಗತಿ ಪರೀಕ್ಷೆಗೆ ತಾಲ್ಲೂಕಿನಲ್ಲಿ 13 ಕೇಂದ್ರ ಹಾಗೂ 2 ಉಪಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಉತ್ತರ ಪತ್ರಿಕೆಗಳನ್ನು ಈಗಾಗಲೇ ಪರೀಕ್ಷಾ ಕೇಂದ್ರಕ್ಕೆ ಕಳಿಸಲಾಗಿದೆ. ಒಟ್ಟಿನಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಸಂಯೋಜಕಿ ಜಯಾ ಮಾಲತೇಶ್ ಹೇಳಿದರು.
ಕೊರೊನಾ ನಿಯಂತ್ರಣಕ್ಕಾಗಿ ಗುಟ್ಕಾ ಸೇರಿದಂತೆ ವಿವಿಧ ನಮೂನೆಯ ತಾಂಬೂಲ ಜಗಿದು ಕಂಡ ಕಂಡಲ್ಲಿ ಉಗುಳುವವರಿಗೆ ದಂಡ ಹಾಕಿ ಎಂದು ತಾ.ಪಂ ಅಧ್ಯಕ್ಷೆ ತಾಲ್ಲೂಕು ವೈದ್ಯಾಧಿಕಾರಿಯವರಿಗೆ ಸೂಚಿಸಿದರು.
ಕಂಡ ಕಂಡಲ್ಲಿ ಉಗುಳ ಬಾರದು, ಉಗುಳಿದರೆ ದಂಡ ಹಾಕಲಾಗುವುದು ಎಂದು ಎಲ್ಲಾ ಇಲಾಖೆಯವರು ನಾಮಫಲಕ ಹಾಕಿ, ನಾಮಫಲಕ ಹಾಕುವುದರ ಜೊತೆಗೆ ದಂಡ ಹಾಕುವುದನ್ನು ಜಾರಿಗೆ ತರಬೇಕು ಎಂದು ಅವರು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್ ಅವರು, ಪಟ್ಟಣದ ಬಾಣಗೇರಿಯಲ್ಲಿ ಬಾಲಕನಿಗೆ ಕೊರೊನಾ ಸೋಂಕು ದೃಢವಾದ ನಂತರ ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದ 7 ಜನರನ್ನು ಕ್ವಾರಂಟೈನ್ಗೆ ಹಾಗೂ ದ್ವಿತೀಯ ಸಂಪರ್ಕಕ್ಕೆ ಇದ್ದವರನ್ನು ಹೋಮ್ ಕ್ವಾರಂಟೈನ್ಗೆ ಅಳವಡಿಸಲಾಗಿದೆ. 166 ಮನೆಗಳ ಇರುವ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಗೊಂದಿ ಅವರು, ಮೇ ಅಂತ್ಯಕ್ಕೆ ಶೇ.17 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ, ಬಿತ್ತನೆ ಬೀಜ ವಿತರಣಾ ಕಾರ್ಯ ಪ್ರಗತಿಯಲ್ಲಿದೆ, ಬಿತ್ತನೆ ಬೀಜ ಪಡೆಯಲು ಆಧಾರ್ ಕಾರ್ಡ್ ಹಾಗೂ ಪಹಣಿಯನ್ನು ಕಡ್ಡಾಯವಾಗಿ ರೈತರು ತರಬೇಕು ಎಂದು ಅವರು ತಿಳಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಕೆಂಚನಗೌಡ ಅವರು ಒಂದು ಎಕರೆಗೆ 1 ಪಾಕೆಟ್ (5 ಕಿ.ಲೋ) ಮೆಕ್ಕೇಜೋಳ ಬೀಜ ಸಾಕಾಗುವುದಿಲ್ಲ, ಕನಿಷ್ಟ 6-7 ಕಿಲೋ ಬೇಕು ಎಂದ ಅವರು ರೈತರಿಗೆ ಸ್ಪಿಂಕ್ಲರ್ ಸೆಟ್ ಕೊಡುವಾಗ ತಾರತಮ್ಯವಾಗುತ್ತಿದೆ ಎಂದು ದೂರಿದರು.
ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಲ್.ಆರ್ ಜಯರಾಜ್ ಮಾತನಾಡಿ, ಈಗಾಗಲೇ ಶಾಲೆಗಳು ರಜೆ ಇದ್ದ ಪ್ರಯುಕ್ತ ಬಿಸಿ ಊಟದ ಬದಲು ಅಕ್ಕಿ ಮತ್ತು ಬೇಳೆಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ ಎಂದರು. ಮೀನು ಸಾಕಲು ಕೆರೆಗಳನ್ನು ಟೆಂಡರ್ ಮಾಡುವಾಗ ಸ್ಥಳಿಯರ ಗಮನಕ್ಕೆ ತಂದು ಟೆಂಡರ್ ಮಾಡುವಂತೆ ಕೆಂಚನಗೌಡ ಸಲಹೆ ನೀಡಿದರು. ಮೀನುಗಾರಿಕೆ ಇಲಾಖೆಯ ಮಂಜುಳಾ ಎಲ್ಲಾ ನಿಯಮದ ಪ್ರಕಾರವೇ ಟೆಂಡರ್ ಮಾಡಲಾಗುತ್ತದೆ ಎಂದು ಉತ್ತರಿಸಿದರು.
ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎಇಇ ಎಂ.ಸಿದ್ದರಾಜು ಅವರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಹೇಳಿದರು.
ಅನ್ನಪೂರ್ಣಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಂಜಾನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಕೆಂಚನಗೌಡ, ಇಓ ಅನಂತರಾಜು, ಯೋಜನಾಧಿಕಾರಿ ವಿಜಯಕುಮಾರ್ ಇದ್ದರು.