ಎಲ್ಲಾ ಕಿಟ್ ಹೊಸದಾಗಿದ್ದು, ಹೀಗೇಕೆ ಬಿಸಾಡಿ ಹೋಗಿದ್ದಾರೆ ಎಂಬುದೇ ಜನರಿಗೆ ಕಾಡುತ್ತಿರುವ ಪ್ರಶ್ನೆ
ದಾವಣಗೆರೆ, ಜೂ.5- ಕೊರೊನಾ ಚಿಕಿತ್ಸೆ ವೇಳೆ ವೈದ್ಯ ಸಮೂಹಕ್ಕೆ ರಕ್ಷಾ ಕವಚವಾಗಿರುವ ರಾಶಿ ರಾಶಿ ಪಿಪಿಇ ಕಿಟ್ ಗಳು ರಸ್ತೆಯಲ್ಲೇ ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುವುದು ಪತ್ತೆಯಾಗಿದ್ದು, ಆಶ್ಚರ್ಯವನ್ನುಂಟು ಮಾಡಿರುವ ಘಟನೆ ನಗರದ ಹೊರ ವಲಯದಲ್ಲಿನ ಬನಶಂಕರಿ ಬಡಾವಣೆಯ ಸಮೀಪದ ರಾಷ್ಟ್ರೀಯ ಹೆದ್ದಾರಿ-4ರ ಸರ್ವೀಸ್ ರಸ್ತೆಯಲ್ಲಿ ಇಂದು ಬೆಳಿಗ್ಗೆ ಕಂಡು ಬಂದಿವೆ.
ಆಸ್ಪತ್ರೆಗಳಲ್ಲಿ ಬಳಸುವ ನೂರಾರು ಕ್ಲಿನಿಕಲ್ ಗೌನ್ಗಳುಳ್ಳ ಪ್ಯಾಕ್ ಗಳನ್ನು ರಸ್ತೆಯಲ್ಲಿ ಬಿಸಾಡಲಾಗಿದ್ದು, ಇವೆಲ್ಲವೂ ಯಾವುದೋ ಊರಿಗೆ ಒಯ್ಯುತ್ತಿರುವಾಗ ಬಿಸಾಡಿದಂತಿವೆ. ಎಲ್ಲಾ ಗ್ಲೌಸ್ಗಳು ಹೊಸದಾಗಿದ್ದು, ಹೀಗೇಕೆ ಅವುಗಳನ್ನು ಬಿಸಾಡಿ ಹೋಗಿದ್ದಾರೆ ಎಂಬುದೇ ಜನರಿಗೆ ತೀವ್ರವಾಗಿ ಕಾಡುತ್ತಿರುವ ಪ್ರಶ್ನೆಯಾಗಿದೆ.
ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಗೌನ್ಗಳನ್ನು ಜನರು ಮುಟ್ಟಲು ಸಹ ಹಿಂದೇಟು ಹಾಕಿದರು. ಸಾರ್ವಜನಿಕ ಸ್ಥಳದಲ್ಲಿ ಪಿಪಿಇ ಕಿಟ್ ಮಾದರಿಯ ಗೌನ್ಗಳನ್ನು ಕಂಡ ಜನರೂ ಸಹ ಒಂದು ಕ್ಷಣ ಭಯಭೀತರಾಗಿದ್ದು ಸುಳ್ಳಲ್ಲ. ಪ್ಯಾಕಿಂಗ್ ಮಾಡಿದ್ದ ಹೊಸ ಗೌನ್ಗಳನ್ನು ಹೀಗೆ ರಸ್ತೆಯ ಬದಿಯಲ್ಲಿ ಬಿಸಾಡಿ ಹೋಗಿದ್ದು ಯಾರೆಂಬ ಪ್ರಶ್ನೆ ಕಾಡುತ್ತಿದೆ.
ಇವುಗಳನ್ನು ಕಂಡ ವಾಯು ವಿಹಾರಿಗಳು ಆಶ್ಚರ್ಯಗೊಂಡರಲ್ಲದೇ, ಗ್ಲೌಸ್ಗಳು ರಸ್ತೆ ಬದಿಯಲ್ಲಿ ಬಿಸಾಡಿದ್ದನ್ನು ವೀಡಿಯೋ ಮಾಡಿ, ಫೋಟೋ ತೆಗೆದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕೆಲವರು ಆಟೋದಲ್ಲಿ ಗೌನ್ಗಳನ್ನು ತೆಗೆದುಕೊಂಡು ಹೋಗಿದ್ದು ಇದೆ.
ಬೆಂಗಳೂರು ಮನೋಜ ಫಾರ್ಮಾದಲ್ಲಿ ಮೇ ತಿಂಗಳಲ್ಲಿ ಉತ್ಪಾದನೆಯಾದ ಈ ಉತ್ಪನ್ನಗಳನ್ನು ದಾವಣಗೆರೆ ಮಾರ್ಗವಾಗಿ ಸಾಗುವ ವಾಹನದಿಂದ ಆಕಸ್ಮಿಕವಾಗಿ ಸಾವಿರಾರು ಗೌನ್ಗಳ ಬಾಕ್ಸ್ ಬಿದ್ದಿರಬಹುದು ಅಥವಾ ಯಾರಾದರೂ ಬಾಕ್ಸ್ಗಳನ್ನು ಸಾಗುತ್ತಿದ್ದ ವಾಹನದಿಂದಲೇ ಬಿಸಾಡಿರಬಹುದು ಎಂಬುದಾಗಿ ಶಂಕಿಸಲಾಗಿದೆ.
ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಬೆಂಗಳೂರಿನ ಫಾರ್ಮಾ ಜೊತೆಗೆ ಪೊಲೀಸರು ಸಂಪರ್ಕಿಸಲು ಪ್ರಯತ್ನಿಸಿದ್ದು, ಸತ್ಯಾಸತ್ಯತೆ ತಿಳಿಯಬೇಕಿದೆ.