ಪರಿಸರ ಸಂರಕ್ಷಿಸದಿದ್ದರೆ ಪರಿಣಾಮ ಎದುರಿಸಬೇಕಾದೀತು

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಕೆ.ಬಿ. ಗೀತಾ ಆತಂಕ

ದಾವಣಗೆರೆ, ಜೂ.5- ಪರಿಸರ ಸಂರಕ್ಷಿಸದಿದ್ದರೆ ಮುಂದಾಗುವ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಪ್ರಕೃತಿ ಇಂದು ಸಮಾಜಕ್ಕೆ ಸೂಚನೆ ನೀಡಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ ಗೀತಾ ಹೇಳಿದ್ದಾರೆ.

ಜಿಲ್ಲಾ ಕಾನೂನು ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ  ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಇಂದು ಏರ್ಪಾಡಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ನಿರ್ದಿಷ್ಟ ಉದ್ದೇಶ ಮತ್ತು ಸಮಯದಲ್ಲಿ ಮುಂಗಾರು ಮಳೆ ಆರಂಭವಾಗುವ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮವಾದ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಜೀವ ವೈವಿಧ್ಯವನ್ನು ಉಳಿಸಿಕೊಳ್ಳದೇ ಹೋದಲ್ಲಿ ಅನಾರೋಗ್ಯಕರ ಪರಿಣಾಮಗಳು ಎದುರಾಗುತ್ತವೆ. ಪರಿಸರ ದಿನಾಚರಣೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸದೇ ವರ್ಷಪೂರ್ತಿ ಆಚರಣೆ ಮಾಡಬೇಕು ಎಂದು ಅವರು ಹೇಳಿದರು. 

ಜೀವ ವೈವಿಧ್ಯಗಳ ರಕ್ಷಣೆ ಉದ್ದೇಶದಿಂದ ಇಂದು ಔಷಧಿಯ ಸಸ್ಯಗಳನ್ನು ಕೋರ್ಟ್‍ನ ಆವರಣದಲ್ಲಿ ನೆಡಲಾಗಿದೆ. ಔಷಧಿ ಸಸ್ಯಗಳ ರಕ್ಷಣೆ ಮೂಲಕ ನಾವು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಗೀತಾ ಅವರು ಕರೆ ನೀಡಿದರು. 

ಪರಿಸರ ದಿನಾಚರಣೆ ಪ್ರಯುಕ್ತ ಪರಿಸರ ಸಂರಕ್ಷಣೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ವೇಳೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ ಗೀತಾ ಅತ್ಯಮೂಲ್ಯವಾದ ಪರಿಸರ ಸಂಪನ್ಮೂಲಗಳನ್ನು ರಕ್ಷಣೆ ಮಾಡಿ ಸಸ್ಯ ಮತ್ತು ಹಸಿರು ಪರಿಸರವನ್ನು ಅಭಿವೃದ್ದಿಗೊಳಿಸಬೇಕು. ವರ್ಷಕ್ಕೆ ಒಬ್ಬರು ಒಂದಕ್ಕಿಂತ ಹೆಚ್ಚು ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡಬೇಕು. ನೀರು, ವಿದ್ಯುತ್, ಪೆಟ್ರೋಲ್ ದುರುಪಯೋಗ ಮಾಡಬಾರದು, ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕೆಂದು ಬೋಧಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ ಮಂಜುನಾಥ್ ಮಾತನಾಡಿ, ಇಂದು ಪ್ರಕೃತಿ ವಿಕೋಪದಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಗಳ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ.
ಗಿಡ ಮರಗಳನ್ನು ನೆಡುವುದು  ನಿತ್ಯೋತ್ಸವವಾಗಬೇಕೆಂದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್. ಅರುಣ್‍ಕುಮಾರ್ ಮಾತನಾಡಿ, ನಾವೆಲ್ಲರೂ ಸಕಾರಾತ್ಮಕ ಧೋರಣೆಯಿಂದ ಜೀವನ ಸಾಗಿಸುವ ಅವಶ್ಯಕತೆಯಿದ್ದು ಸಮಾಜದಲ್ಲಿ ಬರುವಂತಹ ಎಲ್ಲಾ ತೊಂದರೆಗಳನ್ನು ಎದುರಿಸುವಂತಹ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಮುಂದಿನ ಸಮಾಜಕ್ಕಾಗಿ ಮತ್ತು ಭವಿಷ್ಯಕ್ಕಾಗಿ ಗಿಡಗಳನ್ನು ನೆಡಬೇಕೆಂದರು. 

ಜಿಲ್ಲಾ ನ್ಯಾಯಾಧೀಶರುಗಳಾದ ಬಿ.ಎಲ್. ಜಿನರಾಲ್ಕರ್, ಕೆಂಗಬಾಲಯ್ಯ, ನಾಗಶ್ರೀ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ಮೂರ್ತಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಾಬಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಈ. ಚಂದ್ರಕಲಾ, ಪ್ರಭು ಎನ್. ಬಡಿಗೇರ್, ನಗರದ ನ್ಯಾಯಾಧೀಶರು, ಮುಖ್ಯ ಆಡಳಿತಾಧಿಕಾರಿ
ಕೆ.ಶ್ರೀಧರ್, ವಕೀಲರ ಸಂಘದ ಉಪಾಧ್ಯಕ್ಷ ದಿವಾಕರ್, ಕಾರ್ಯದರ್ಶಿ ಬಿ.ಎಸ್. ಲಿಂಗರಾಜ್, ಬಸವರಾಜ್,  ಎನ್.ಎಂ.ಆಂಜನೇಯ ಗುರೂಜಿ, ಜಿಲ್ಲಾ ಸರ್ಕಾರಿ ವಕೀಲರಾದ ವೈ.ಮಂಜಪ್ಪ ಕಾಕನೂರು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!