ವಿಂಡ್ ಮಿಲ್‌ಗಳ ಲಾಕ್‌ಗೆ ಜಗಳೂರು ಶಾಸಕರ ಸೂಚನೆ

ಜಗಳೂರು, ಜೂ. 5- ನಮ್ಮ ನೆಲ, ನಮ್ಮ ಗಾಳಿ ಎಲ್ಲವೂ ಪಡೆದು ನಿಯಮಾನುಸಾರ ಪರ್ಯಾಯ ಅರಣ್ಯ ಅಭಿ ವೃದ್ಧಿ ಮಾಡದೇ, ಗ್ರಾಮ ಪಂಚಾಯಿತಿಗಳಿಗೂ ಕೊಡಬೇಕಾಗಿರುವ ಲಕ್ಷಾಂತರ ರೂಪಾಯಿ ವಾರ್ಷಿಕ ಶುಲ್ಕ ನೀಡದಿರುವ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ವಿಂಡ್ ಮಿಲ್‌ಗಳನ್ನು ತಕ್ಷಣವೇ ಲಾಕ್ ಮಾಡುವಂತೆ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಶಾಸಕ ಎಸ್.ವಿ.ರಾಮಚಂದ್ರ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸಾಮಾಜಿಕ ಅರಣ್ಯ ವಿಭಾಗ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗ ವಾಗಿ ನೇರಳೆ, ಬೇವು, ಕಾಡು ಬಾದಾಮಿ ಸೇರಿದಂತೆ ವಿವಿಧ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಂಡ್ ಮಿಲ್‌ಗಳ ಮಾಲೀಕರು ಸಾಮಾಜಿಕ ಹೊಣೆಗಾರಿಕೆ ನಿಭಾಯಿ ಸದೆ, ಕೇವಲ ಹಣ ಗಳಿಕೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ ಶಾಸಕರು, ನೂರಾರು ಎಕರೆ ಜಮೀನು ಪಡೆದು ವಿಂಡ್ ಮಿಲ್ ಅಳವಡಿಸಿದ್ದಾರೆ. ಅವರು ಅರಣ್ಯ ಸಂರಕ್ಷಣೆಗೆ ಹೆಚ್ಚು  ಒತ್ತು ನೀಡಬೇಕು. ಈ ಬಗ್ಗೆ ಜನರೂ ಜಾಗೃತರಾಗಬೇಕು ಎಂದು ಕರೆ ನೀಡಿದರು.

ಕೊಂಡುಕುರಿಗಳ ನಾಡಾದ ನಮ್ಮ ತಾಲ್ಲೂಕಿನ ಅರಣ್ಯ ಉಳಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾಡಿನ ನೆನಪು ಮಕ್ಕಳಿಗೆ ಇರುವುದಿಲ್ಲ. ಮಳೆ ವ್ಯತ್ಯಾಸ ಆಗಲು ಪರಿಸರವೇ ಕಾರಣ. ವಿನಾಶದ ಅಂಚಿಗೆ ಹೋಗುತ್ತಿರುವ ಪರಿಸರವನ್ನು ನಾವು ಉಳಿಸಬೇಕು. ಇಲ್ಲವಾದರೆ ಪರಿಸರ ನಾಶದಿಂದ ಇಡೀ ಮನುಕುಲವೇ ನಶಿಸಿ ಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರು ಉದ್ಯೋಗ ಖಾತ್ರಿ ಯೋಜನೆಯಡಿ ಹೊಲ, ಮನೆ ಮುಂಭಾಗ ಬೇವು, ನೇರಳೆ ಸೇರಿದಂತೆ ವಿವಿಧ ಬಗೆಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಿಸಬೇಕು ಎಂದು ಕರೆ ನೀಡಿದರು. 

ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ, ವಿಂಡ್ ಸೋಲಾರ್  ಕಂಪನಿಗಳು ರೈತರ  ಜಮಿನುಗಳನ್ನು ಖರೀದಿ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೆರೆಗಳಿಗೆ ನೀರು ಬಂದಾಗ ಜಮೀನು ಇಲ್ಲದಂತಗಾ ಬಾರದು.  ಹಾಗಾಗಿ ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಬಾರದು ಎಂದು ಸಲಹೆ ನೀಡಿದರು.

ಸಾಮಾಜಿಕ ವಲಯ ಅರಣ್ಯಾಧಿಕಾರಿ ಶ್ವೇತಾ,  ನಮ್ಮ ಇಲಾಖೆಯಿಂದ ಬೇವು, ನೇರಳೆ, ಕಾಡು ಬಾದಾಮಿ ಸೇರಿದಂತೆ ವಿವಿಧ ಬಗೆಯ ಗಿಡಗಳನ್ನು ರೈತರು ಪಡೆದು  ತಮ್ಮ ಹೊಲಗಳ ಬದುಗಳಲ್ಲಿ ಹಾಕಿಕೊಳ್ಳಬೇಕು ಎಂದರು.

ತಾ.ಪಂ. ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಮುದೇಗೌಡ್ರು ಬಸವರಾಜ್, ಜಿ.ಪಂ ಸದಸ್ಯ ಮಂಜುನಾಥ್, ತಾ.ಪಂ. ಸದಸ್ಯ ಸಿದ್ದೇಶ್, ಇಓ ಮಲ್ಲನಾಯ್ಕ್, ಸಿಪಿಐ ದುರುಗಪ್ಪ,  ವಲಯ ಅರಣ್ಯಾಧಿಕಾರಿ ಪ್ರಕಾಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪಲ್ಲಾಗಟ್ಟೆ ಹೆಚ್.ಸಿ. ಮಹೇಶ್, ಮಾಜಿ ಅಧ್ಯಕ್ಷ ನಾಗಪ್ಪ, ಮುಖಂಡರಾದ ಬಿಸ್ತುವಳ್ಳಿ ಬಾಬು ಮತ್ತಿತರರು ಹಾಜರಿದ್ದರು.

error: Content is protected !!