ಕೊರೊನಾ ತಡೆ : ವಿಶ್ವಾಸಕ್ಕೆ ತೆಗೆದುಕೊಳ್ಳದ ಅಧಿಕಾರಿಗಳು

ಹರಿಹರ, ಜೂ.5- ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ವಿಚಾರದಲ್ಲಿ ಜಿ.ಪಂ, ತಾ.ಪಂ, ಗ್ರಾ.ಪಂ ಸದಸ್ಯರನ್ನು ಯಾವುದೇ ಅಧಿಕಾರಿಗಳು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಸಿರಿಗೆರೆ ಕ್ಷೇತ್ರದ ತಾ.ಪಂ. ಸದಸ್ಯ ಕೊಟ್ರೇಶಗೌಡ್ರು ದೂರಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪನವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. 

ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆಯಿಂದ ಬಹಳ ಜನರಿಗೆ ತೊಂದರೆ ಆಗುತ್ತಿದ್ದು, ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ತಮಗೆ ಇಷ್ಟ ಬಂದಂತೆ ವರ್ತನೆ ಮಾಡುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಕಿಡಿಕಾರಿದರು.

ಗ್ರಾಮೀಣ ಪ್ರದೇಶದಲ್ಲಿ ಕ್ರಮವಾಗಿ ಮರಳು ಸಾಗಾಟ ಮಾಡಲಿಕ್ಕೆ ಹಿಂದೆ ಇದ್ದ ಮಲೇಬೆನ್ನೂರು ಪಿಎಸ್‍ಐ ಅವರು 50 ಟ್ರ್ಯಾಕ್ಟರ್‌ಗಳಿಂದ ಒಂದು ವಾಹನಕ್ಕೆ ವಾರಕ್ಕೆ 20 ರಿಂದ 30 ಸಾವಿರ ರೂ ವಸೂಲಿ ಮಾಡಿದ್ದಾರೆ. ಇವರನ್ನು ತಹಬದಿಗೆ ತರುವು ದಕ್ಕೆ ಯಾವುದೇ ಅಧಿಕಾರಿಗಳು ಇಲ್ಲವೇ?  ಠಾಣೆಗೆ ಯಾರಾದರು ಹೋದರೆ ಸರ್ವಾಧಿ ಕಾರಿಯಂತೆ ವರ್ತಿಸುತ್ತಾರೆ ಎಂದರು.

ಕೊರೊನಾ ಲಾಕ್‌ಡೌನ್ ವಿಚಾರದಲ್ಲಿ ಜನರಿಗೆ ಭಯ ಹುಟ್ಟಿಸಿ, ಒಂದು ವಾಹನಕ್ಕೆ 500 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಸಾರ್ವಜನಿಕರು ರಶೀದಿ ಕೇಳಿದರೆ ಅವರನ್ನು ಬೆದರಿಸುವ ಕೆಲಸವನ್ನು ಪೊಲೀಸ್ ಇಲಾಖೆಯವರು ಮಾಡುತ್ತಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಆದಾಪುರದ ವೀರಭದ್ರಪ್ಪ ಮಾತನಾಡಿ, ದೇಶದಲ್ಲಿ ಕೊರೊನಾ ಸಮಸ್ಯೆ ವಿಚಾರಕ್ಕೆ ಲಾಕ್‌ಡೌನ್ ಮಾಡಿ ಈಗ ಲಕ್ಷಾಂತರ ರೂಪಾಯಿ ತೆರಿಗೆ ರೂಪದಲ್ಲಿ ಜನರಿಂದ ವಸೂಲಿ ಮಾಡಲಾಗುತ್ತದೆ. ಇದರಿಂದ ಬಡವರು ಬದುಕುವುದು ಕಷ್ಟವಾಗುತ್ತದೆ. ಮೊದಲೇ ಕೆಲಸವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಮತ್ತೆ ಮೇಲೆ ತೆರಿಗೆ ಹೊರೆ ಇದರಿಂದಾಗಿ ಸರ್ಕಾರ ಜನರಿಗೆ ತೆರಿಗೆ ಹಣವನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಕಾಯಿಲೆ ಅಂತ ರೋಗಿಗಳು ಹೋದಾಗ ಅವರಿಗೆ ಮಾತ್ರೆಗಳನ್ನು ಮಾತ್ರ ನೀಡಿ ಕಳಿಸುತ್ತಾರೆ. ಹಾಗಾದರೆ ಸರ್ಕಾರ ಕಳಿಸಿಕೊಡುವ ಸಿರೆಂಜ್ ಯಾವುದಕ್ಕೆ ಬಳಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಶಾಲೆಯ ಜಮೀನುಗಳನ್ನು ಉಳ್ಳವರು ಆಕ್ರಮಿಸಿಕೊಂಡು ಅದರಿಂದ ಬರುವಂತಹ ಆದಾಯವನ್ನು ನುಂಗಿ ನೀರು ಕುಡಿಯುತ್ತಿದ್ದಾರೆ. ಆದ್ದರಿಂದ ಅಂತಹ ಶಾಲೆ, ಜಮೀನುಗಳನ್ನು ಶಿಕ್ಷಣ ಇಲಾಖೆ ವಶಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಕೊಠಡಿಗಳನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಬೇಕು ಎಂದು ಸಲಹೆ
 ನೀಡಿದರು.

ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಮಾತನಾಡಿ, ಈ ಬಾರಿ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಜೂನ್ 25 ರಿಂದ ಜುಲೈ 4 ರವರೆಗೆ ನಡೆಸಲಾಗುತ್ತದೆ. ತಾಲ್ಲೂಕಿನಲ್ಲಿ 19 ಸರ್ಕಾರಿ ಪ್ರೌಢಶಾಲೆ ಹಾಗೂ 42 ಖಾಸಗಿ ಪ್ರೌಢಶಾಲೆಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ 6 ಕೇಂದ್ರ ಮತ್ತು ನಗರ ಪ್ರದೇಶದಲ್ಲಿ 4 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಎಲ್ಲಾ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್ ಮಾತನಾಡಿ, ಹರಿಹರ ತಾಲ್ಲೂಕಿನಲ್ಲಿ ಇದುವರೆಗೂ ಒಂದೂ ಕೊರೊನಾ ಸೋಂಕು ಪ್ರಕರಣ ಕಂಡು ಬಂದಿರುವುದಿಲ್ಲ. ನಿನ್ನೆ ಮೃತಪಟ್ಟ ಮಹಿಳೆ ತಾಲ್ಲೂಕಿನ ದೇವರಬೆಳಕೆರೆ ಗ್ರಾಮದ ಮಗನ ಮನೆಗೆ ಬಂದು ದಾವಣಗೆರೆಗೆ ಹೋಗಿ ನಂತರದಲ್ಲಿ ಅಲ್ಲಿ ಮರಣ  ಹೊಂದಿದ್ದಾರೆ. ಅವರ ಸಂಪರ್ಕಕ್ಕೆ ಇದ್ದ 15 ಜನರಿಗೆ ತಪಾಸಣೆ ಮಾಡಿ ಅವರನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಉಪಾಧ್ಯಕ್ಷೆ ಜಯಮ್ಮ ಬಸವಲಿಂಗಪ್ಪ, ಸದಸ್ಯರಾದ ಮಹಾಂತೇಶ ಕುಣೆಬೆಳಕೇರಿ, ಜಾಹಿರಾಬಿ, ಪ್ರೇಮಾ ಕೊಂಡಜ್ಜಿ, ಬಸವರಾಜಪ್ಪ, ಶಾಂತಮ್ಮ, ವಿಶಾಲಾಕ್ಷಿ ಭಾನುವಳ್ಳಿ, ಭಾಗ್ಯಲಕ್ಷ್ಮಿ, ಶಂಭುಲಿಂಗಪ್ಪ, ಬಸವಲಿಂಗಪ್ಪ, ಲಕ್ಷ್ಮಿ ರಾಜನಹಳ್ಳಿ, ರತ್ನಮ್ಮ ಜಿಗಳಿ, ಅಧಿಕಾರಿಗಳಾದ ಡೊಂಕಪ್ಪ, ಪರಮೇಶ್ವರಪ್ಪ, ವಿ.ಪಿ. ಗೋವರ್ಧನ್ ಮತ್ತು ಇತರರು ಹಾಜರಿದ್ದರು.    

error: Content is protected !!