ಹರಿಹರದಲ್ಲಿ ಗುತ್ತಿಗೆ ನೌಕರರಿಂದ ಪ್ರತಿಭಟನೆ : ಮನವಿ

ಹರಿಹರ, ಜೂ. 4- ಕೋವಿಡ್-19 ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಆರೋಗ್ಯ ವಿಮೆ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಮುಂದಿಟ್ಟು ಗುರುವಾರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸಿಬ್ಬಂದಿಗಳು ಕೆಲಸ ಬಹಿಷ್ಕರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಶಾಸಕ ಎಸ್. ರಾಮಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಗುತ್ತಿಗೆ ಆಧಾರಿತ ದಿನಗೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಜಿ.ಕೆ. ಪಂಚಾಕ್ಷರಿ ಮಾತನಾಡಿ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆಯುತ್ತೇವೆ ಎಂದು ಹೇಳಿದರು.

ಸಂಘದ ಗೌರವಾಧ್ಯಕ್ಷ ಕೊಟ್ರಪ್ಪ ಮಾತನಾಡಿ, ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸಮಾನ  ಕೆಲಸಕ್ಕೆ ಸಮಾನ ವೇತನ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅದೇ ಆದೇಶವನ್ನು ಲಿಖಿತ ರೂಪದಲ್ಲಿ ಕೊಡಬೇಕೆಂದು ಮನವಿ ಮಾಡಿಕೊಂಡರು.  

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಚಂದ್ರಮೋಹನ್, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಎಲ್. ಹನುಮನಾಯಕ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿಪತಿ ಹೊರಕೇರಿ, ಸಂಘದ ಕಾರ್ಯದರ್ಶಿ ಎನ್.ಇ. ಸುರೇಶ್ ಸ್ವಾಮಿ ಹಾಗೂ ಲ್ಯಾಬ್ ಟೆಕ್ನೀಷಿಯನ್ ವಿಜಯ್ ಕುಮಾರ್,  ಎನ್‌.ಆರ್‌.ಹೆಚ್‌.ಎಂ.  ಶುಶ್ರೂಷಕಿಯರಾದ ಗೀತಾ, ಗಂಗಾ, ವಸಂತ ಸಾಲಕಟ್ಟೆ, ನಾಗರಾಜ್ ಬಳ್ಳಾಪುರ, ಗೀತಾ, ಗಂಗಮ್ಮ ಮತ್ತು ಗುತ್ತಿಗೆ ಆಧಾರಿತ ಸಿಬ್ಬಂದಿ ವರ್ಗದವರಾದ ರಜನಿಕಾಂತ್, ಚಂದ್ರಶೇಖರ್, ಮಂಜುಳಾ, ಶಾಂತಾಬಾಯಿ, ಸುಮಲತಾ, ಎಂ. ಲಿಂಗರಾಜು, ಲಕ್ಷ್ಮಿಬಾಯಿ, ಹನುಮಂತು, ಶಿಲ್ಪ, ಕರಿಬಸಮ್ಮ, ರತ್ನಮ್ಮ, ವಿಜಯಮ್ಮ, ದುರ್ಗೇಶ್, ಮಂಜು ಮತ್ತಿತರರು ಉಪಸ್ಥಿತರಿದ್ದರು.

error: Content is protected !!