ದಾವಣಗೆರೆ, ಜೂ.3- ಚನ್ನಗಿರಿಯಿಂದ ದಾವಣಗೆರೆಗೆ ಬರುವ ದ್ವಾರದ ಎಡಭಾಗದ ರಸ್ತೆಯಲ್ಲಿ ಕಸದ ರಾಶಿಗಳು ಹಾಗೂ ತ್ಯಾಜ್ಯದ ವಸ್ತುಗಳು ದಾವಣಗೆರೆ ಸ್ಮಾರ್ಟ್‌ಸಿಟಿಗೆ ಸ್ವಾಗತ ಕೋರುತ್ತಿರುವಂತಿದೆ.
ದಾವಣಗೆರೆ ಸ್ಮಾರ್ಟ್ ಸಿಟಿಗೆ ನಾವು ಶ್ರಮಿಸಿದ್ದೇವೆ ಎಂದು ಒಬ್ಬರ ಮೇಲೊಬ್ಬರು ಶಹಬ್ಬಾಷ್‌ಗಿರಿ ಪಡೆದುಕೊಳ್ಳುತ್ತಿದ್ದಾರೆ. ಚನ್ನಗಿರಿ ಕಡೆಯಿಂದ ದಾವಣಗೆರೆಗೆ ಬರುವ ಶಿರಮಗೊಂಡನಹಳ್ಳಿ ದಾಟಿದ ಮೇಲೆ ಭದ್ರಾ ಕಾಲುವೆಯ ಪಕ್ಕ, ಪಿಡಬ್ಲ್ಯೂಡಿ ರಸ್ತೆಯ ಎಡಭಾಗಕ್ಕೆ 1000 ಅಡಿ ಉದ್ದಕ್ಕೆ ಕಸದ ರಾಶಿಗಳು ಸ್ವಾಗತಿಸುತ್ತಿವೆ.
ಇದರ ಮಧ್ಯೆಯೇ ನಾವು ಜೂನ್ 5ನ್ನು ಪರಿಸರ ದಿನವಾಗಿ ಆಚರಿಸಬೇಕಾಗಿರುವುದು ದುರ್ದೈವವೇ ಸರಿ ಎಂದು ನೆಲ ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನಾ ಸಮಿತಿ ರಾಜ್ಯ ಸಂಚಾಲಕ ಬಲ್ಲೂರು ರವಿಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಈ ಕಸದ ರಾಶಿಯ ಗುಡ್ಡೆಗಳನ್ನು ಜೂನ್ 5ರೊಳಗೆ ತೆಗೆಸದೇ ಇದ್ದರೆ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.