ವಿಶೇಷ ಅನುದಾನದಡಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜಾ ಸಮಾರಂಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ
ಜಗಳೂರು, ಜೂ.3- 4 ಕೋಟಿ ವಿಶೇಷ ಅನುದಾನದಡಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಆಯೋಜಿಸಿದ್ದ ವಿಶೇಷ ಅನುದಾನದಡಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದ ಕೆಇಬಿ ಸರ್ಕಲ್ನಿಂದ ತಾಲ್ಲೂಕು ಆಫೀಸ್ವರೆಗೆ ಹಾಗೂ ತಾಲ್ಲೂಕು ಆಫೀಸ್ನಿಂದ ವೈಭವ ಹೋಟೆಲ್ವರೆಗೆ ದ್ವಿಮುಖ ರಸ್ತೆ ನಿರ್ಮಾಣ ಹಾಗೂ ವಿದ್ಯುದೀಕರಣ ಕಾಮಗಾರಿಗೆ 2 ಕೋಟಿ ವೆಚ್ಚ ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ಐ.ಬಿ ಸರ್ಕಲ್ನಿಂದ ದೊಣೆಹಳ್ಳಿ ಗೇಟ್ವರೆಗೆ ಹಾಗೂ ಐ.ಬಿ ವೃತ್ತದಿಂದ ರಾಘವೇಂದ್ರ ಆಸ್ಪತ್ರೆಯವರೆಗೆ ದ್ವಿಮುಖ ರಸ್ತೆ ಎರಡು ಬದಿ ಫೇವರ್ ಬ್ಲಾಕ್ ಮತ್ತು ಗ್ರಿಲ್ ನಿರ್ಮಾಣ 1.20 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 156 ಜನಕ್ಕೆ ಕೊರೊನಾ ಬಂದಿತ್ತು. 31 ಜನ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಕೊರೊನಾ ಬಂದವರು ಕ್ವಾರಂಟೈನ್ನಲ್ಲಿ ರುವುದಿಲ್ಲ, ಭಯಬೇಡ. ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಕಾರ್ಯಗಳಲ್ಲಿ ತೊಡಗಬೇಕು. ಕೊರೊನಾ ವಾರಿಯರ್ಸ್ಗೆ ಸಹಕರಿಸಬೇಕು ಎಂದು ಹೇಳಿದರು.
ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ಕಳೆದ 6 ವರ್ಷಗಳಲ್ಲಿ ಜಗಳೂರು ಏನು ಅಭಿವೃದ್ಧಿಯಾಗಿದೆ ಯೋಚಿಸಿ. ಯಾರು ಏನೇ ಮಾತನಾಡಿದರು ತಲೆಕೆಡಿಸಿಕೊಳ್ಳದೆ ಪಟ್ಟಣವನ್ನು ಇನ್ನೂ 3 ವರ್ಷಗಳಲ್ಲಿ ಅಭಿವೃದ್ಧಿಪಡಿಸಿ ತೋರಿಸುವೆ ಎಂದರು.
ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾದರೆ ಬರ ಮುಕ್ತವಾಗಲಿದೆ ಎಂದರು.
ಸಂಸದ ಸಿದ್ದೇಶಣ್ಣನವರ ಇಚ್ಛಾಶಕ್ತಿ, ಅವರ ಸಹಕಾರ ನಮಗಿದೆ. ಜಗಳೂರು ತಾಲ್ಲೂಕು ದಾವಣಗೆರೆಯಂತೆ ಮಾದರಿಯಾಗ ಲಿದೆ. ನಾನು 3,300 ಕೋಟಿ ಅನುದಾನ ತಂದಿಲ್ಲ. ಕೇವಲ 1 ಸಾವಿರ ಕೋಟಿ ತಂದಿರುವೆ ಬರದ ನಾಡನ್ನು ಹಸಿರು ನಾಡನ್ನಾಗಿಸುವೆ ಎಂದು ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಮಂಡಲ ಅಧ್ಯಕ್ಷ ಹೆಚ್.ಸಿ. ಮಹೇಶ್ ಪ.ಪಂ ಸದಸ್ಯರಾದ ನವೀನ್, ಲುಕ್ಮಾನ್ ಖಾನ್, ಶಕೀಲ್ ಅಹಮದ್, ಆರ್. ತಿಪ್ಪೇಸ್ವಾಮಿ, ವಿಎಸ್ಎಸ್ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಮುಖ್ಯಾಧಿಕಾರಿ ರಾಜು ಡಿ. ಬಣಕಾರ್ ಮತ್ತಿತರರು ಭಾಗವಹಿಸಿದ್ದರು.