ದಾವಣಗೆರೆ, ಜೂ.3- ಕಳೆದ ಎರಡು ದಿನಗಳಿಂದ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಕೋವಿಡ್ ಮಹಾಮಾರಿಯ ಕರಿನೆರಳಿನ ಛಾಯೆಯಿದ್ದರೂ ಎಲ್ಲಾ ರೈತರು ಅಗತ್ಯ ಕ್ರಮ ಅನುಸರಿಸಿ, ತಮ್ಮ ತಮ್ಮ ಹೊಲಗಳಲ್ಲಿ ಮುಂಗಾರು ಬಿತ್ತನೆಗೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯೂ
ಸಹ ಮುಂಗಾರು ಬಿತ್ತನೆಗೆ ತಾಲ್ಲೂಕಿನಾದ್ಯಂತ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪರಿಕರಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಪ್ರೊ.ಲಿಂಗಣ್ಣ ಹೇಳಿದರು.
ಆನಗೋಡು ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕಳಪೆ ಬಿತ್ತನೆ ಬೀಜ ವಿತರಣೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ರೈತರಿಗೆ ಅವಶ್ಯವಿರುವ ಎಲ್ಲಾ ಬಿತ್ತನೆ ಬೀಜಗಳನ್ನು ಕಡ್ಡಾಯವಾಗಿ ತೊಂದರೆಯಾಗದಂತೆ ಸರಿಯಾದ ಸಮಯಕ್ಕೆ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಹಾಯಕ ಕೃಷಿ ನಿರ್ದೇಶಕ ಹೆಚ್.ಕೆ. ರೇವಣಸಿದ್ದನಗೌಡ ಮಾತನಾಡಿ, ಒಟ್ಟಾರೆ ತಾಲ್ಲೂಕಿನಾದ್ಯಂತ 58 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇದೆ. ಅವಶ್ಯಕತೆ ಇರುವ ಬಿತ್ತನೆ ಬೀಜಗಳ ದಾಸ್ತಾನು ಪ್ರಕ್ರಿಯೆ ನಿರಂತರ ವಾಗಿದ್ದು ರೈತರಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ. ತಾಲ್ಲೂಕಿನಾದ್ಯಂತ ಒಟ್ಟು 8 ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬೀಜ ವಿತರಣೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಐಗೂರು ಗ್ರಾಮದ ರೈತ ಶಿವಕುಮಾರ್ ಮಾತನಾಡಿ, ಇಲಾಖೆಯವರು ನಕಲಿ ಪರಿಕರಗಳ ಬಗ್ಗೆ ಇನ್ನೂ ಹೆಚ್ಚು ಕಠಿಣ
ಕ್ರಮ ವಹಿಸಬೇಕು ಮತ್ತು ಕಳೆದ ವರ್ಷದಂತೆ ಈ ಸಾರಿಯೂ ಸಿರಿಧಾನ್ಯ ಹಾಗೂ ದ್ವಿದಳ ಧಾನ್ಯ ಬೆಳೆಗಳಿಗೆ ಪ್ರೋತ್ಸಾಹ ಧನ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದರು.