ದಾವಣಗೆರೆ, ಜೂ. 3- ಅಮೆರಿಕ ಸರ್ಕಾರದ ಜನಾಂಗೀಯ ದ್ವೇಷದ ವಿರುದ್ಧ ಮತ್ತು ಕಪ್ಪು ವರ್ಣದ ಜನರ ಮೇಲೆ ನಡೆಸಲಾದ ಹಲ್ಲೆಯ ವಿರುದ್ಧ ಹಾಗೂ ಕಪ್ಪು ವರ್ಣದ ನಾಗರಿಕ ಜಾರ್ಜ್ ಫ್ಲಾಯ್ಡ್ ಅವರ ಭೀಕರ ಹತ್ಯೆ ವಿರೋಧಿಸಿ, ಪ್ರಗತಿ ಪರರು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಂಘಟನಾ ಸಮಿತಿಯ ನೇತೃತ್ವದಲ್ಲಿ ನಗರದ ಗಾಂಧಿ ವೃತ್ತದಲ್ಲಿ ನಿನ್ನೆ ಪ್ರತಿಭಟನೆ ನಡೆಸಿದರು.
ಅಮೆರಿಕದ ಸಾಮ್ರಾಜ್ಯಶಾಹಿ ಆಡಳಿತಗಾರರ ಜನ ವಿರೋಧಿ ನೀತಿಗಳ ವಿರುದ್ಧ ಐತಿಹಾಸಿಕ ಚಳವಳಿಯ ಮಧ್ಯೆ ಇರುವ ಯುಎಸ್ಎ ಹೋರಾಟಗಾರರೊಂದಿಗೆ ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ. ಇದು ಜನಾಂಗೀಯ ದಬ್ಬಾಳಿಕೆಯ ವಿರುದ್ಧ ಮಾತ್ರವಲ್ಲದೇ, ಎಲ್ಲಾ ಜನ ವಿರೋಧಿ ನೀತಿಗಳು ಮತ್ತು ಅಮೆರಿಕದ ಸಾಮ್ರಾಜ್ಯಶಾಹಿ ಆಡಳಿತಗಾರರ ವ್ಯಾಪಕ ನಿರುದ್ಯೋಗ, ಸಾರ್ವಜನಿಕ ಕ್ಷೇತ್ರದ ಅನುದಾನ ಹಿಂಪಡೆಯುವಿಕೆ, ಹಸಿವು ಮತ್ತು ಕೋವಿಡ್ -19 ನಿಭಾಯಿಸಲು ಕ್ರಿಮಿನಲ್ ನಿರ್ಲಕ್ಷ್ಯವನ್ನು ಒಳಗೊಂಡಂತೆ ಜನರ ಸಂಗ್ರಹವಾದ ಕುಂದು ಕೊರತೆಗಳ ಜ್ವಾಲಾಮುಖಿ ಸ್ಫೋಟದಂತಹ ಪ್ರಕೋಪವಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಅಮೆರಿಕದ ಜನಾಂಗೀಯ ಹೋರಾಟದಲ್ಲಿ ಜನರು ವಿಜಯ ಸಾಧಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಸಂಘಟನೆಯ ಮುಖಂಡ ಮಂಜುನಾಥ್ ಕೈದಾಳೆ ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಸುನೀತ್ ಕುಮಾರ್, ಬಿ.ಆರ್. ಅಪರ್ಣಾ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ಜಿಲ್ಲಾ ಸಮಿತಿ ಸದಸ್ಯರಾದ ಮಂಜುನಾಥ್ ಕುಕ್ಕುವಾಡ, ತಿಪ್ಪೇಸ್ವಾಮಿ ಅಣಬೇರು, ರಾಘ ವೇಂದ್ರ ನಾಯ್ಕ, ಮಧು ತೊಗಲೇರಿ, ಕಾರ್ಯ ಕರ್ತರಾದ ಜ್ಯೋತಿ ಕುಕ್ಕುವಾಡ, ಪರಶುರಾಮ್, ಭಾರತಿ, ಸೌಮ್ಯ, ಸ್ಮಿತಾ ಇತರರಿದ್ದರು.