ದಾವಣಗೆರೆ, ಜೂ. 3- ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲಿ ಟೈಲರ್ಸ್ ಕಲ್ಯಾಣ ಮಂಡಳಿ ಜಾರಿಗೆ ತರುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಟೈಲರ್ಸ್ ಮತ್ತು ಸಹಾಯಕರ ಫೆಡರೇಷನ್ ನೇತೃತ್ವದಲ್ಲಿ ನಗರದಲ್ಲಿ ಮೊನ್ನೆ ಟೈಲರ್ಸ್‌ಗಳು ಹೋರಾಟದ ಮುಖೇನ ಸರ್ಕಾರದ ಗಮನ ಸೆಳೆದರು.
ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಟೈಲರ್ಸ್ ಗಳು, ಪ್ರತಿಭಟಿಸಿ ನಂತರ ಉಪವಿಭಾಗಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯಾದ್ಯಂತ ಟೈಲರ್ ವೃತ್ತಿ ಮಾಡುವವರು ಅಸಂಘಟಿತ ವಲಯದವರಾಗಿದ್ದು, ಯಾವುದೇ ಸೌಲಭ್ಯಗಳಿಲ್ಲದೇ ಬಳಲುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಅಕ್ಕಪಕ್ಕದ ರಾಜ್ಯಗಳಲ್ಲಿ ಟೈಲರ್‌ಗಳ ಕಲ್ಯಾಣ ಮಂಡಳಿ ಜಾರಿಯಲ್ಲಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಜಾರಿ ಮಾಡಬೇಕು. ಕೋವಿಡ್-19 ಸಂಕಷ್ಟದ ಈ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿರುವ ಟೈಲರಿಂಗ್ ವೃತ್ತಿ ಮಾಡುವ ಎಲ್ಲರಿಗೂ ಅವರ ಜೀವನೋಪಾಯಕ್ಕಾಗಿ ಪ್ರತಿ ಟೈಲರ್ ಗೆ 5 ಸಾವಿರ ರೂ. ಧನ ಸಹಾಯ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಹೆಚ್.ಕೆ. ರಾಮಚಂದ್ರಪ್ಪ, ಆನಂದರಾಜ್, ಆವರಗೆರೆ ಚಂದ್ರು, ಸಿ.ರಮೇಶ್, ಬೊಮ್ಮಕ್ಕ, ಯಶೋಧ, ಸರೋಜಾ, ಶಾಂತಕುಮಾರ್ ಹಾಗೂ ಮಂಜುಳಾ ಇದ್ದರು.