ಕೋವಿಡ್-19 ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ಯಶಸ್ವಿ

ಜಗಳೂರು, ಜೂ. 2- ಲಾಕ್‌ಡೌನ್‌ನಿಂದ ತೆರಿಗೆ ಸಂಗ್ರಹಣೆ ಇಲ್ಲದೇ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ಕೋವಿಡ್-19 ನಿಯಂತ್ರಿಸುವಲ್ಲಿ  ಮೋದಿ ಸರ್ಕಾರ ಯಶಸ್ವಿಯಾಗಿದೆ ಎಂದು ಸಂಸದ ಜಿ.ಎಂ‌ ಸಿದ್ದೇಶ್ವರ  ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ತರಳಬಾಳು ಕೇಂದ್ರದಲ್ಲಿ  ಇಂದು ಏರ್ಪಾಡಾಗಿದ್ದ, ಕೋವಿಡ್-19 ಸಮಸ್ಯೆ ಎದುರಿಸುತ್ತಿರುವ ನಾಗರಿಕರಿಗೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.

ಕೊರೊನಾದಿಂದ ದೇಶದ ಜನತೆ ಕಂಗಾಲಾಗದಂತೆ ಬಡ ವರ್ಗದ ಪರವಾಗಿ ನಿಂತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಉಚಿತ ಗ್ಯಾಸ್ ನೀಡಿದೆ, ಜನ್ ಧನ್ ಖಾತೆದಾರರಿಗೆ 3 ತಿಂಗಳ ಕಾಲ ತಲಾ 500 ರೂ. ಜಮಾ, ಕೂಲಿ ಕಾರ್ಮಿಕರಿಗೆ ತಲಾ 5,000 ರೂ ಪಾವತಿಸಲಾಗಿದೆ, 10 ಕೆಜಿ ಅಕ್ಕಿ, 1 ಕೆಜಿ ಬೇಳೆ‌ ಇನ್ನೂ ಎರಡು ತಿಂಗಳು ಕೊಡ್ತಿದ್ದಾರೆ ಎಂದರು.

ಅಮೆರಿಕಾದಲ್ಲಿ 1 ಲಕ್ಷ ಸಾವುಗಳಾದರೆ ಭಾರತ ದಲ್ಲಿ ಕೇವಲ 3 ಸಾವಿರ ಜನ ಕೊರೊನಾದಿಂದ ಸಾವಿಗೀಡಾಗಿದ್ದು ವಯಸ್ಸಾದವರು, ಮಕ್ಕಳು ಸಾವನ್ನಪ್ಪಿದ್ದಾರೆ. ಇದು ಲಾಕ್‌ಡೌನ್ ಪರಿಣಾಮ ಬಿಜೆಪಿ ಸರ್ಕಾರದ ಮುಂಜಾಗ್ರತೆಯಿಂದ  ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದರು.

ರಾಜ್ಯದಲ್ಲಿ ಯಡಿಯೂರಪ್ಪ ಅವರೂ ಕೂಡಾ ಅಹೋರಾತ್ರಿ ಕೋವಿಡ್-19 ನಿಯಂತ್ರಿಸುವಲ್ಲಿ  ಯುವಕರಂತೆ ಉತ್ಸಾಹದಿಂದ‌ ಕೆಲಸ ನಿರ್ವಹಿಸಿದ್ದಾರೆ.

ಸಿರಿಗೆರೆ ಶ್ರೀಗಳ ಆಶಯದಂತೆ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಭದ್ರಾ ಮೇಲ್ದಂಡೆ ಯೋಜನೆ ಯಶಸ್ವಿಯಾಗುವುದು. ಕೆಲವೆ ದಿನಗಳಲ್ಲಿ ನೀರಾವರಿ ಕ್ಷೇತ್ರವಾಗುತ್ತದೆ. ಬರ ದೂರವಾಗಲಿದೆ.

ವಿರೋಧ ಪಕ್ಷದವರಿಗೆ ಕೆಲಸವಿಲ್ಲದ ವಿನಾಕಾರಣ ಕಾಲೆಳೆಯುತ್ತಿದ್ದಾರೆ. ಸರ್ಕಾರ ಬೀಳುತ್ತದೆ, ಚುನಾವಣೆ ಬರುತ್ತದೆ ಎಂದು ವದಂತಿಗಳಿಗೆ‌ ಕಿವಿಗೊಡಬೇಡಿ.  ಕೊನೆಯವರೆಗೂ ಶಾಸಕ ಎಸ್.ವಿ ರಾಮಚಂದ್ರ ಅವರನ್ನು ಉಳಿಸಿಕೊಳ್ಳಿ. ಜನಪರ ಕಾಳಜಿಯಿಂದ ಲಾಕ್‌ಡೌನ್ ಅವಧಿಯಲ್ಲೂ ಕೆಲಸ ಮಾಡುತ್ತಿದ್ದಾರೆ.

ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ತಾಲ್ಲೂಕಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಅನುಮಾನಾಸ್ಪದವಾಗಿರುವ ವ್ಯಕ್ತಿಗಳಿಗೆ ಕ್ವಾರಂಟೈನ್‌ನಲ್ಲಿಡಲಾಗಿದೆ. ಅವರು ಕೊರೊನಾ ಸೋಂಕಿತರಲ್ಲ ಭಯಬೇಡ ಎಂದರು.

ವಯೋವೃದ್ಧರು, ಮಕ್ಕಳು ಮನೆಯಲ್ಲಿದ್ದು ಉಳಿದಂತೆ ತಾವುಗಳು ಸಾಮಾಜಿಕ ಅಂತರದೊಂದಿಗೆ ನರೇಗಾ ದಡಿ  ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸಿ, ಜಾಗೃತರಾಗಿರಿ. ಇದು ಕೊನೆಯದಾಗಿ ಕಿಟ್ ವಿತರಣೆ ಮಾಡುತ್ತಿದ್ದು ಲಾಕ್‌ಡೌನ್ ಸಡಿಲಿಕೆಯಾಗಿದ್ದು ಇನ್ನು ಮುಂದೆ ದುಡಿಮೆ ಮಾಡಿ ಸ್ವಾವಲಂಬಿಗಳಾಗಿ ಬದುಕಿರಿ. ನಿಮ್ಮೊಂದಿಗೆ ಕಷ್ಟ, ಸುಖಕ್ಕೆ  ನಾನು ಜೊತೆಗಿರುವೆ ಎಂದು ಆತ್ಮಸ್ಥೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್,  ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್ ಪಲ್ಲಾಗಟ್ಟೆ, ಜಿಪಂ ಸದಸ್ಯರಾದ ಎಸ್.ಕೆ. ಮಂಜುನಾಥ್,  ಶಾಂತಕುಮಾರಿ,  ವಿಎಸ್ಎಸ್ಎನ್  ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಡಿಸಿಸಿ ಬ್ಯಾಂಕ್ ನಾಮನಿರ್ದೇಶಕ ಸೂರಡ್ಡಿಹಳ್ಳಿ ಶರಣಪ್ಪ, ಬಿಜೆಪಿ ತಾಲ್ಲೂಕು ಮಾಜಿ ಅಧ್ಯಕ್ಷ ಡಿ.ವಿ ನಾಗಪ್ಪ, ಕೃಷ್ಣಮೂರ್ತಿ, ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ, ಇಒ ಮಲ್ಲಾನಾಯ್ಕ, ಪ.ವರ್ಗಗಳ‌ ಕಲ್ಯಾಣ ಇಲಾಖೆ ಸಹಾಯಕ‌ ನಿರ್ದೇಶಕ ಬಿ. ಮಹೇಶ್,  ಪಪಂ ಮುಖ್ಯಾಧಿಕಾರಿ ರಾಜು ಬಣಕಾರ್ ಮತ್ತಿತರರು ಭಾಗವಹಿಸಿದ್ದರು.

error: Content is protected !!