ದಾವಣಗೆರೆ, ಜೂ.1- ಲಾಕ್ಡೌನ್ ದಿಂದ 2 ತಿಂಗಳ ಸ್ತಬ್ಧವಾಗಿದ್ದ ದಾವಣಗೆರೆ ನ್ಯಾಯಾಲಯ ಸಂಕೀರ್ಣ ಸೋಮವಾರ ಕಾರ್ಯಾರಂಭ ಮಾಡಿತು.
ಕರ್ನಾಟಕ ರಾಜ್ಯ ಹೈಕೋರ್ಟ್ ನಿರ್ದೇಶನದ ಮೇರೆಗೆ ಸಾರ್ವಜನಿಕ ಪ್ರವೇಶ ನಿಷೇಧಿಸಿ ಆಯ್ದ ವಕೀಲರು, ನ್ಯಾಯಾಧೀಶರು ಮತ್ತು ಸಿಬ್ಬಂದಿಗೆ ಮಾತ್ರ ಸಂಕೀರ್ಣದಲ್ಲಿ ಆವಕಾಶ ನೀಡಲಾಗಿತ್ತು.
ಜಿಲ್ಲಾ ನ್ಯಾಯಾಲಯದಲ್ಲಿ ಒಟ್ಟು 9 ಕೋರ್ಟ್ ಹಾಲ್ಗಳಿದ್ದು, ಸೋಮವಾರ ಬೆಳಿಗ್ಗೆ 11 ಗಂಟೆಗೆ ಕಾರ್ಯಾರಂಭಗೊಂಡವು. 20 ಜನ ವಕೀಲರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 10 ಹಾಗೂ ಮಧ್ಯಾಹ್ನ 10 ಪ್ರಕರಣ ವಿಚಾರಣೆ ನಡೆಸಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಆದರೆ ಮಧ್ಯಾಹ್ನದ ವೇಳೆಗೆ ವಕೀಲರ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಪ್ರಕರಣಕ್ಕೆ ಸಂಬಂಧಿಸಿದವರನ್ನು ಹೊರತುಪಡಿಸಿ ಅನಗತ್ಯವಾಗಿ ವಕೀಲರು ಪ್ರವೇಶಿಸಿದಂತೆ ತಡೆಯಲಾಯಿತು.
ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ, ವಕೀಲರು ಯಾವ ಕಾರಣಕ್ಕಾಗಿ ನ್ಯಾಯಾಲಯದ ಸಂಕೀರ್ಣದೊಳಗೆ ಪ್ರವೇಶಿಸುತ್ತಿದ್ದಾರೆ ಎಂಬ ಬಗ್ಗೆ ಈ ಮೇಲ್ ಮೂಲಕ ಜಿಲ್ಲಾ ನ್ಯಾಯಾಧೀಶರಿಗೆ ಮಾಹಿತಿ ನೀಡಿ, ನ್ಯಾಯಾಧೀಶರಿಂದ ಪರವಾನಗಿ ಪಡೆದ ನಂತರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿತ್ತು.
ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ಎಸ್. ಲಿಂಗರಾಜ್, ಲಾಕ್ಡೌನ್ನಿಂದ ವಿಚಾರಣೆಗಳು ನಡೆದಿರಲಿಲ್ಲ. ಇದೀಗ ಮತ್ತೆ ರಾಜ್ಯ ಹೈಕೋರ್ಟ್ ಸೂಚನೆ ಮೇರೆಗೆ ಕಲಾಪಗಳು ಆರಂಭವಾಗಲಿದ್ದು, ವಕಿಲರು ಸಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿಕೊಂಡು ಕಲಾಪಕ್ಕೆ ಹುರುಪಿನಿಂದ ಹಾಜರಾಗಿದ್ದಾರೆ ಎಂದರು.
ಲಾಕ್ಡೌನ್ ಸಮಯದಲ್ಲಿ ಹೆಚ್ಚಿನ ಕಾನೂನು ಉಲ್ಲಂಘನೆಯಾದ ಪ್ರಕರಣಗಳು ವರದಿಯಾಗಿಲ್ಲ. ಆದ್ದರಿಂದ ಜಾಮೀನು ಹಾಗೂ ತಡೆಯಾಜ್ಞೆ ಪಡೆಯುವ ಕೇಸುಗಳನ್ನು ಹೊರತುಪಡಿಸಿದರೆ ಬಹುತೇಕ ಸಿವಿಲ್ ಹಾಗೂ ಕ್ರಿಮಿನಲ್ ಕೇಸುಗಳು ಕಡಿಮೆಯಾಗಿವೆ.
ಸದ್ಯ ಕೊರೊನಾ ವೈರಸ್ ಗೆ ಸಂಬಂಧಪಟ್ಟಂತೆ ಸರ್ಕಾರ ರೂಪಿಸಿರುವ ನಿಬಂಧನೆಗಳ ಜೊತೆಗೆ, ಹೈಕೋರ್ಟ್ ಸೂಚಿಸಿರುವ ಮಾರ್ಗಸೂಚನೆಗಳನ್ವಯ ಪ್ರತಿದಿನ ಬೆಳಿಗ್ಗೆ 10 ಮತ್ತು ಮಧ್ಯಾಹ್ನ 10 ರಂತೆ ದಿನಕ್ಕೆ ಒಟ್ಟು 20 ಪ್ರಕರಣಗಳನ್ನು ಮಾತ್ರ ಕೈಗೆತ್ತಿಕೊಳ್ಳಬೇಕು. ಉಳಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ದಿನಾಂಕಗಳನ್ನು ನಿಗದಿಪಡಿಸಿ ಮುಂದೂಡಬೇಕಿದೆ.
ಕೈಗೆತ್ತಿಕೊಳ್ಳುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಗೈರು ಹಾಜರಿಯಲ್ಲಿ ವಿಚಾರಣೆ ತೆಗೆದು ಕೊಳ್ಳುವಂತಿಲ್ಲ. ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರು ನ್ಯಾಯಾ ಧೀಶರು ಮತ್ತು ಸಿಬ್ಬಂದಿ ಸೇರಿದಂತೆ 20 ಜನರೊಳಗೆ ಇರಬೇಕು. ಯಾವುದೇ ಕಾರಣಕ್ಕೂ ಕಕ್ಷಿದಾರರಿಗೆ ಸಭಾಂಗಣದೊಳಗೆ ಅವಕಾಶವಿಲ್ಲವಾಗಿದೆ.