ದಾವಣಗೆರೆ, ಮೇ 30- ಕಾರ್ಮಿಕರ ಕೆಲಸದ ಅವಧಿ ವಿಸ್ತರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪದಾಧಿಕಾರಿಗಳು ನಗರದ ಪಿಬಿ ರಸ್ತೆಯಲ್ಲಿರುವ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿಂದು ಸರ್ಕಾರದ ಆದೇಶದ ಪ್ರತಿ ದಹನ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ನಂತರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಈವರೆಗೂ ಇದ್ದ ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಗೆ ಬದಲಾಗಿ ಮಾಲೀಕರ ಒತ್ತಡಕ್ಕೆ ಮಣಿದು 10 ಗಂಟೆಗೆ ಅವಧಿಯನ್ನು ವಿಸ್ತರಿಸಿದೆ ಇದು ಖಂಡನೀಯ. ಸರ್ಕಾರ ಮಾಲೀಕರ ಒತ್ತಡಕ್ಕೆ ಯಾವುದೇ ಕಾರಣಕ್ಕೂ ಮಣಿಯಬಾರದು. ಕೆಲಸದ ಸಮಯ ವಿಸ್ತರಿಸಿರುವುದು ಅವೈಜ್ಞಾನಿಕ ಕ್ರಮ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ಹಿತದೃಷ್ಟಿಯಿಂದ ಈ ಮೊದಲು ಇದ್ದಂತೆ ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಗೆ ಸೀಮಿತವಾಗಿ ಇರುವಂತೆ ಪುನಃ ಪರಿಶೀಲನೆ ನಡೆಸಿ ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡರಾದ ಹೆಚ್.ಕೆ. ರಾಮಚಂದ್ರಪ್ಪ, ಆವರಗೆರೆ ಚಂದ್ರು, ಆವರಗೆರೆ ವಾಸು, ಕೆ.ಎಲ್. ಭಟ್, ಕೈದಾಳೆ ಮಂಜುನಾಥ್, ಆನಂದರಾಜ್, ನಾಗರಾಜ್, ತಿಪ್ಪೇಶ್, ಗುಡ್ಡಪ್ಪ, ಶ್ರೀನಿವಾಸ್, ಲಕ್ಷ್ಮಣ, ಐರಣಿ ಚಂದ್ರು, ಸರೋಜ, ಭಾರತಿ, ತಿಪ್ಪೇಸ್ವಾಮಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.