ಭಿನ್ನಾಭಿಪ್ರಾಯಗಳಿಲ್ಲ, ರಾಜ್ಯ ಸರ್ಕಾರ ಸುಭದ್ರವಾಗಿದೆ

ಜಗಳೂರು, ಮೇ 30- ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಮನೆಯ ಜಗಳ ಮನೆಯ (ಪಕ್ಷದ) ಹಿರಿಯರು, ಪಕ್ಷದ ಹೈಕಮಾಂಡ್ ಬಗೆಹರಿಸುತ್ತದೆ ಎಂದು ಶಾಸಕರೂ ಆದ ಹಟ್ಟಿ ಚಿನ್ನದ ಗಣಿ ನಿಗಮದ ಮಾಜಿ ಅಧ್ಯಕ್ಷ ಎಸ್‌.ವಿ. ರಾಮಚಂದ್ರ ತಿಳಿಸಿದ್ದಾರೆ.

ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಇಂದು ಅನ್ನಪೂರ್ಣ ಟ್ರಸ್ಟ್‌ ಸಂಸ್ಥೆಯವರು ಆಯೋಜಿಸಿದ್ದ ಆನ್‌ಲೈನ್ ಮೂಲಕ ಫುಡ್‌ ಕಿಟ್ ಕೂಪನ್ ವಿತರಿಸುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆಲವು ಶಾಸಕರು ಸಭೆ ನಡೆಸಿದರೆ ಭಿನ್ನಾಭಿ ಪ್ರಾಯ ಅಲ್ಲ. ಮುಖ್ಯಮಂತ್ರಿಗಳು ಕೊರೊನಾ ಲಾಕ್‌ಡೌನ್‌ ಮಧ್ಯೆ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಚುರುಕುಗೊಂಡಿವೆ. ಜಿಲ್ಲೆಯ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರೂ ಸಹ ಚುರುಕಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ವರ್ಷದಲ್ಲಿ ತಾಲ್ಲೂಕಿನಲ್ಲಿ ನಡೆದ ಅವ್ಯವ ಹಾರಕ್ಕೆ ಸಂಬಂಧಿಸಿದಂತೆ ತನಿಖಾ ತಂಡದ ವರದಿ ಆಧರಿಸಿ ಪಿ.ಡಿ.ಓ, ಕಾರ್ಯದರ್ಶಿಗಳನ್ನು ಅಮಾನತ್ತು ಗೊಳಿಸಲಾಗಿದೆ. ತಪ್ಪಿತಸ್ಥರು ಶಿಕ್ಷೆ ಅನುಭವಿಸಬೇಕು. ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದ ಶಾಸಕರು, ಈ ವರ್ಷ ಖಾತ್ರಿ ಯೋಜನೆ ಅಡಿ ರೈತರಿಗೆ, ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಬದು ನಿರ್ಮಾಣ, ಏರಿ ಅಭಿವೃದ್ಧಿ, ಅಂತರ್‌ಜಲ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಯಾವುದೇ ಮಧ್ಯವರ್ತಿಗಳಿಲ್ಲದೇ ಕಾರ್ಮಿಕರ ಖಾತೆಗೆ ಕೂಲಿ ಹಣ ಜಮಾ ಮಾಡಲಾಗುತ್ತಿದೆ ಎಂದರು.

ತಾಲ್ಲೂಕಿನಾದ್ಯಂತ ಶುದ್ಧ ನೀರಿನ  ಘಟಕಗಳ ರಿಪೇರಿಗೆ ಟೆಂಡರ್ ಕರೆಯಲಾಗಿದೆ. ಶೀಘ್ರವೇ ದುರಸ್ತಿ ಕಾರ್ಯ ನಡೆಯಲಿದೆ. ಹೊಸದಾಗಿ 56 ಗ್ರಾಮಗಳಲ್ಲಿ ಶುದ್ಧ ನೀರು ಘಟಕಗಳ ಸ್ಥಾಪನೆ ಮಾಡಲಾಗುವುದು. ಇವುಗಳ ಘಟಕ ವೆಚ್ಚ ಆರು ಲಕ್ಷ ರೂ. ಗಳಾಗಿವೆ ಎಂದರು.

ಪಟ್ಟಣದ ವ್ಯಾಪ್ತಿಯಲ್ಲಿ ನಿರ್ಮಿಸಿರುವ 88 ಲಕ್ಷ ರೂ ವೆಚ್ಚದ ಟ್ಯಾಂಕ್‌ಗಳು ಕಳಪೆಯಾಗಿದ್ದು ಅವುಗಳನ್ನು ಪುನಃ ರಿಪೇರಿ ಮಾಡಲಾಗುತ್ತಿದೆ ಎಂಬ ದೂರಿನ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದು, ಮೂರನೇ ವ್ಯಕ್ತಿ ತನಿಖೆಯ ನಂತರವೇ ಹಣ ಪಾವತಿಸುವಂತೆ ಸೂಚಿಸಿದ್ದೇನೆ ಎಂದರು.

ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ, ಅನ್ನಪೂರ್ಣ ಟ್ರಸ್ಟ್‌ನವರು ಜಿಲ್ಲೆಯಲ್ಲಿ ಪ್ರಥಮವಾಗಿ ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಆನ್‌ಲೈನ್‌ನಲ್ಲಿ ಆಹಾರದ ಕಿಟ್‌ ಕೂಪನ್‌ಗಳನ್ನು ವಿತರಿಸುವ ವಿನೂತನ ಪ್ರಯೋಗ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ಪ್ರಥಮವಾಗಿ ಫುಡ್‌ ಕಿಟ್‌ ಕೂಪನ್‌ ವಿತರಿಸಿದ ಪ್ರಥಮ ಶಾಸಕ ರಾಮಚಂದ್ರ ಅವರಾಗಿದ್ದಾರೆ ಎಂದರು.

ಅನ್ನಪೂರ್ಣ ಕೈಗಾರಿಕಾ ಘಟಕ ಕಡಿಮೆ ವೆಚ್ಚದಲ್ಲಿ `ಮಾಸ್ಕ್‌’ಗಳನ್ನು ತಯಾರಿಸಿ ವಿತರಿಸುತ್ತಿದ್ದು,  ಕಾರ್ಮಿಕರಿಗೆ ಫುಡ್‌ ಕಿಟ್‌ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸಮಾರಂಭದಲ್ಲಿ ಕೈಗಾರಿಕಾ ಘಟಕದ ಮಲ್ಲಿಕಾರ್ಜುನ್‌, ಬಿಜೆಪಿ ತಾಲ್ಲೂಕು ಅಧ್ಯಕ್ಷ ಹೆಚ್‌.ಸಿ. ಮಹೇಶ್‌, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸೂರಡ್ಡಿಹಳ್ಳಿ ಶರಣಪ್ಪ, ಪ.ಪಂ. ಸದಸ್ಯರಾದ ನವೀನ್‌ಕುಮಾರ್, ದೇವರಾಜ್, ಕಂದಾಯ ನಿರೀಕ್ಷಕ ಕುಬೇರ್‌ನಾಯ್ಕ್  ಮತ್ತಿತರರು ಉಪಸ್ಥಿತರಿದ್ದರು.

error: Content is protected !!