22 ಕೆರೆ ನೀರು ತುಂಬಿಸುವ ಕಾಮಗಾರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ
ದಾವಣಗೆರೆ, ಮೇ 30- 22 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಗರದ ಹೊರವಲಯದಲ್ಲಿನ ಸರ್ಕ್ಯೂಟ್ ಹೌಸ್ನಲ್ಲಿ ಶನಿವಾರ ನಡೆಸಲಾಯಿತು.
ಸಭೆಯಲ್ಲಿ ದುರಸ್ತಿ ಕಾಮಗಾರಿಗಳನ್ನು ಮುಗಿಸಿ ಕೆರೆಗೆ ನೀರು ಹರಿಸುವುದನ್ನು ಆರಂಭಿಸಲು ಜೂನ್ 25ರ ಗಡುವು ನೀಡಲಾಯಿತು.
15 ದಿನದೊಳಗೆ ಪೈಪ್ ಗಳ ಸೋರಿಕೆಯನ್ನು ಸರಿಪಡಿಸಬೇಕು. ಈಗಾಗಲೇ ಗುತ್ತಿಗೆದಾರರ ಅವಧಿ ಆಗಸ್ಟ್ ತಿಂಗಳಿಗೆ ಮುಗಿಯಲಿದ್ದು, ಅವಧಿ ಮುಂದುವರೆ ಸುವಂತೆ ಸೂಚಿಸಲಾಯಿತು.
ಆರು ಪಥದ ರಸ್ತೆ ನಿರ್ಮಾಣವಾಗುವ ವೇಳೆ 13.5 ಕಿ.ಮೀ. ಪೈಪ್ ಲೈನ್ ಸ್ಥಳಾಂತರಿಸಲಾಗಿದ್ದು, ಪೈಪುಗಳನ್ನು ಸೂಕ್ತ ರೀತಿಯಲ್ಲಿ ವೆಲ್ಡಿಂಗ್ ಮಾಡಿಸಿ, ನೀರು ಸೋರಿಕೆಯಾಗದಂತೆ ಕ್ರಮ ವಹಿಸಬೇಕು. ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಲಾಗುತ್ತಿದ್ದು, ಇನ್ನೂ 30 ಮೀಟರ್ ಬಾಕಿ ಇರುವ ಬ್ಯಾರೇಜ್ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಲು ಸೂಚಿಸಲಾಯಿತು.
ಎರಡೂ ಜಾಕ್ವೆಲ್ಗಳಲ್ಲಿ ವಿದ್ಯುತ್ ಸರಬರಾಜನ್ನು ಸರಿದೂಗಿಸಿಕೊಂಡು ಕನಿಷ್ಟ 120 ದಿನಗಳಾದರೂ ನೀರು ಹರಿಸುವಂತೆ ಒತ್ತಾಯಿಸಲಾಯಿತು.
ಜಗಳೂರು ತಾಲ್ಲೂಕಿನ ಬಿಳಿಚೋಡು, ಹಾಲೇಕಲ್ಲು ಹಾಗೂ ದಾವಣಗೆರೆ ತಾಲ್ಲೂಕು ನರಗನಹಳ್ಳಿ ಕೆರೆಗೆ ಇದುವರೆಗೂ ನೀರು ಹರಿದಿಲ್ಲ. ಉಳಿದಂತೆ ಕಬ್ಬೂರು, ಈಚಘಟ್ಟ, ತುಪ್ಪದಹಳ್ಳಿ ಕೆರೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ನೀರು ತಲುಪಿದೆ. ಈ ಎಲ್ಲಾ ಕೆರೆಗಳನ್ನು ಕನಿಷ್ಟ ಅರ್ಧದಷ್ಟಾದರೂ ತುಂಬಿಸಬೇಕಿದೆ ಎಂದು ಹೋರಾಟ ಸಮಿತಿ ಪದಾಧಿಕಾರಿಗಳು ಸಭೆಯಲ್ಲಿ ಆಗ್ರಹಿಸಿದರು.
ಸಭೆಯಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್, ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ, 22 ಕೆರೆಗಳ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಡಾ. ಮಂಜುನಾಥ ಗೌಡ, ಉಪಾಧ್ಯಕ್ಷ ಚಂದ್ರನಾಯ್ಕ, ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂಗಜ್ಜ ಗೌಡ್ರು, ಪಾಲಿಕೆ ಮಾಜಿ ಮೇಯರ್ ವಸಂತ್ ಕುಮಾರ್ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು, ರಾಷ್ಟೀಯ ಹೆದ್ದಾರಿ ಅಧಿಕಾರಿಗಳು, ಕಾಮಗಾರಿ ಅಧಿಕಾರಿಗಳು ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.