ದಾವಣಗೆರೆ, ಮೇ.29- ‘ಆಶಾ ಸಂರಕ್ಷಣಾ ದಿನ’ ದ ಅಂಗವಾಗಿ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಗಳನ್ನು ಖಂಡಿಸಿ, ಸೂಕ್ತ ರಕ್ಷಣೆಗೆ ಆಗ್ರಹಿಸಿ ನಗರದಲ್ಲಿಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟಿಸಿ, ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಕೊರೊನಾ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ರೋಗಾಣುವಿನ ಹರಡುವಿಕೆ ತಡೆಗಟ್ಟಲು ಶ್ರಮಿಸುತ್ತಿದ್ದಾರೆ. ರಾಜ್ಯದಾದ್ಯಂತ ಕಳೆದ 2 ತಿಂಗಳಿಂದ ಅವಿರತ ಸೇವೆಯಲ್ಲಿರುವ ‘ಫ್ರಂಟ್ ಲೈನ್ ವಾರಿಯರ್ಸ್’ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಗಳು ದಿನದಿಂದ ದಿನ ಹೆಚ್ಚಾಗುತ್ತಿರುವುದು ಆಶಾ ಸಮುದಾಯಕ್ಕೆ ತುಂಬಾ ಭಯ-ಆತಂಕವನ್ನು ಉಂಟು ಮಾಡಿದೆ. ಇಂತಹ ಸಂದರ್ಭದಲ್ಲೂ ಆಶಾ ಕಾರ್ಯಕರ್ತೆಯರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಕೊರೊನಾ ವೈರಸ್ ತಡೆಗೆ ಪ್ರತಿ ದಿನ ಮನೆ-ಮನೆಗೆ ತೆರಳುವ ಆಶಾ ಕಾರ್ಯಕರ್ತೆಯರು ಕೆಲ ಪುಂಡರ ಮತ್ತು ಪಾನಮತ್ತರ ಕೆಂಗಣ್ಣಿಗೆ ಬಲಿಯಾಗುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಅಸಮಾಧಾನ ವ್ಯಕ್ತಪಡಿಸಿದರು.
ಫ್ರಂಟ್‍ಲೈನ್ ವಾರಿಯರ್ಸ್ ಆಶಾ ಕಾರ್ಯಕರ್ತೆಯರ ಮೇಲೆ ದೈಹಿಕ ಹಲ್ಲೆ ಮಾಡಿದವರನ್ನು ಶಿಕ್ಷಿಸಬೇಕು ಮತ್ತು ಹಲ್ಲೆಗೊಳಗಾದ ಆಶಾಗೆ ಸೂಕ್ತ ಪರಿಹಾರ ನೀಡಬೇಕು. ಮಾರ್ಚ್ ತಿಂಗಳಿಂದ ಕೋವಿಡ್-19 ಕಾರ್ಯ ನಿಯೋಜನೆ ಇರುವಷ್ಟು ಅವಧಿಗೆ ವಿಶೇಷ ಪ್ಯಾಕೇಜ್ ಮಾಸಿಕ 10 ಸಾವಿರ ಘೋಷಿಸಬೇಕು. ಅಗತ್ಯವಿರುವಷ್ಟು ಮಾಸ್ಕ್ ಹಾಗೂ ಸ್ಯಾನಿಟೈಸರ್, ಗ್ಲೌಸ್‍ಗಳನ್ನು ನೀಡಿ ರಕ್ಷಿಸಬೇಕು. ಆಶಾ ಕಾರ್ಯಕರ್ತೆಯರ ಮೇಲೆ ಪಾನಮತ್ತರಾಗಿ ಹಲ್ಲೆಗೈದವರಿಗೆ ಉಗ್ರ ಶಿಕ್ಷೆ ನೀಡಬೇಕು ಮತ್ತು ಮದ್ಯ ನಿಷೇಧಿಸಬೇಕು. ಕೋವಿಡ್-19 ರಿಂದ ಸಾವಿಗೀಡಾದ ಆಶಾ ಕುಟುಂಬಕ್ಕೆ ನೀಡುವ 50 ಲಕ್ಷ ವಿಮಾ ಸೌಲಭ್ಯ ವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ನಾಯಕ ತಿಪ್ಪೇಸ್ವಾಮಿ ಸೇರಿದಂತೆ ಸಂಘಟನೆಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಇದ್ದರು.