ಪರೀಕ್ಷೆಗೆ ಇಲಾಖೆ ಸನ್ನದ್ಧ: 59 ಹೆಚ್ಚುವರಿ ಕೊಠಡಿಗಳು, ಸರಬರಾಜಾಗಿದೆ ಸ್ಯಾನಿಟೈಸರ್
ದಾವಣಗೆರೆ, ಮೇ 29- ಬರುವ ಜೂನ್ 25 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧವಾಗಿರುವ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 59 ಕೊಠಡಿಗಳಲ್ಲಿ ಪರೀಕ್ಷೆ ನಡೆಸಲಿದೆ.
ಈ ಹಿಂದೆ ಜಿಲ್ಲೆಯಲ್ಲಿ ಒಟ್ಟು 79 ಪರೀಕ್ಷಾ ಕೇಂದ್ರಗಳ 872 ಕೊಠಡಿಗಳಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಂದು ಕೊಠಡಿಯಲ್ಲಿ ಗರಿಷ್ಠ 20 ಮಕ್ಕಳನ್ನು ಕೂರಿಸಲು ಮಾತ್ರ ಅವಕಾಶವಿದೆ.
ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹೆಚ್ಚುವರಿಯಾಗಿ 59 ಕೊಠಡಿಗಳು ಹಾಗೂ ಅಲ್ಲಿ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿ ಸುಸೂತ್ರವಾಗಿ ಪರೀಕ್ಷೆ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ `ಜನತಾವಾಣಿಗೆ ತಿಳಿಸಿದರು.
ಇನ್ನು ಕಂಟೈನ್‌ಮೆಂಟ್ ವಲಯದಲ್ಲಿರುವ ಮಕ್ಕಳು ಪರೀಕ್ಷೆ ಬರೆಯಲು ಪರ್ಯಾಯವಾಗಿ ಕೇಂದ್ರಗಳನ್ನು ಗುರುತಿಸಲಾಗಿದೆ. ಹಿಂದೆ ಇಡೀ ಏರಿಯಾವನ್ನೇ ಕಂಟೈನ್ ಮೆಂಟ್ ವಲಯವನ್ನಾಗಿ ಮಾಡುತ್ತಿದ್ದರು. ಆದರೆ ಈಗ ಸೀಮಿತ ಪ್ರದೇಶವನ್ನು ಕಂಟೈನ್ ಮೆಂಟ್ ಝೋನ್ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗ ಲಾರದು ಎಂದು ಪರಮೇಶ್ವರಪ್ಪ ಅಭಿಪ್ರಾಯಿಸಿದರು.
ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ 22 ಸಾವಿರ ಮಾಸ್ಕ್ ಕೊಡಲಿದೆ. ಇನ್ನು ಸ್ಥಳೀಯ ದಾನಿಗಳಿಂದಲೂ ಸಂಗ್ರಹಿಸು ವಂತೆ ಆಯಾ ವಲಯಗಳ ಬಿಇಒಗಳಿಗೆ ತಿಳಿಸಿರುವುದಾಗಿ ಹೇಳಿದರು.
ಪ್ರತಿ ಮಗುವಿಗೆ 2 ಮಿ.ಲೀ. ಸ್ಯಾನಿಟೈಸರ್ ಹಾಕಬೇಕಿದ್ದು, ಈ ಲೆಕ್ಕದಲ್ಲಿ 265 ಲೀ. ಸ್ಯಾನಿಟೈಸರ್‌ಗೆ ಬೇಡಿಕೆ ಇಟ್ಟಿದ್ದೆವು, ಈಗಾಗಲೇ ಸರ್ಕಾರದಿಂದ ಸ್ಯಾನಿಟೈಸರ್ ಸರಬರಾಜು ಮಾಡಲಾಗಿದೆ ಎಂದರು.
10,311 ಬಾಲಕರು, 10,616 ಬಾಲಕಿಯರು ಸೇರಿ ಒಟ್ಟು 20,927 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿದ್ದಾರೆ. ಶಿಕ್ಷಣ ಇಲಾಖೆ ಪರೀಕ್ಷೆಗೆ ಸನ್ನದ್ಧವಾಗಿದೆ. ಆದರೆ ಮಕ್ಕಳು, ಪೋಷಕರು ಹಾಗೂ ಶಿಕ್ಷಕರಲ್ಲಿ ಕೊರೊನಾ ಭಯ ಇನ್ನೂ ದೂರವಾಗಿಲ್ಲ. ಇದಕ್ಕೆ ಹಲವಾರು ಕಾರಣಗಳೂ ಇವೆ. ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಆತಂಕ ಮುಕ್ತವಾಗಿ ಪರೀಕ್ಷೆ ಎದುರಿಸಲಿದ್ದಾರೆ. ನಗರ ಪ್ರದೇಶದಲ್ಲಿ ಸೋಂಕು ಪೀಡಿತರು ಹೆಚ್ಚಾಗಿರುವುದು ಪೋಷಕರ ಭಯಕ್ಕೆ ಮೂಲ ಕಾರಣವಾಗಿದೆ.
ದೂರವಾಗದ ಪೋಷಕರ ಆತಂಕ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಆದರೆ ಪೋಷಕರಲ್ಲಿ ಮಾತ್ರ ಆತಂಕ ಹೆಚ್ಚುತ್ತಲೇ ಇದೆ. ಸರ್ಕಾರ ಎಷ್ಟೇ ಕಾಳಜಿ ವಹಿಸಿದರೂ ಮಕ್ಕಳ ಹುಮ್ಮಸ್ಸು ತಡೆಯಲಾಗದು. ದೊಡ್ಡವರಂತೆ ಎಚ್ಚರಿಕೆ ವಹಿಸುವುದು ಮಕ್ಕಳಿಗೆ ಅಷ್ಟು ಸುಲಭವಲ್ಲ.
ಪರೀಕ್ಷೆ ಎಂದರೆ ವಿದ್ಯಾರ್ಥಿಗಳಲ್ಲಿ ಆತಂಕ ಭಯ ಸಾಮಾನ್ಯ. ಇಂತಹ ವೇಳೆ ಥರ್ಮಲ್ ಟೆಸ್ಟಿಂಗ್ನಲ್ಲಿ ಏನಾದರೂ ಏರು ಪೇರು ತೋರಿಸಿದರೆ ಏನು ಗತಿ? ಅಂತಹ ಮಕ್ಕಳನ್ನು ಬೇರೆ ಕಡೆ ಪ್ರತ್ಯೇಕವಾಗಿ ಕೂರಿಸಿದರೆ ಅದು ಮಗುವಿನ ಮನಸ್ಸಿನ ಮೇಲೂ ಪ್ರತಿಕೂಲ ಪರಿಣಾಮ ಬೀರುವುದಿಲ್ಲವೇ? ಎಂಬುದು ಪೋಷಕರೊಬ್ಬರ ಆತಂಕ.
ಪರೀಕ್ಷಾ ಸಮಯಕ್ಕೂ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಬಂದು ಮಕ್ಕಳು ಆರೋಗ್ಯ ಪರೀಕ್ಷಿಸಿಕೊಳ್ಳಬೇಕು. ಇಂತಹ ವೇಳೆ ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ಓದಿದ್ದು ಮರೆಯಲೂ ಬಹುದು. ಅಲ್ಲದೆ ಮೂರು ಗಂಟೆ ಮಾಸ್ಕ್ ಹಾಕಿಕೊಂಡು ಪರೀಕ್ಷೆ ಬರೆಯು ವುದು ಮಕ್ಕಳಿಗೆ ಸಾಧ್ಯವೇ? ಎಷ್ಟು ಪರೀಕ್ಷಾ ಕೇಂದ್ರಗಳಲ್ಲಿ ಗಾಳಿ ಹಾಗೂ ಬೆಳಕಿನ ವ್ಯವಸ್ಥೆ ಸಮರ್ಪಕ ವಾಗಿರುತ್ತದೆ? ಎಂಬುದು ಪೋಷಕರ ಪ್ರಶ್ನೆಯಾಗಿದೆ.
3 ಮೀಸಲು ಪರೀಕ್ಷಾ ಕೇಂದ್ರಗಳು : ದಾವಣಗೆರೆಯ ಹಳೇ ಭಾಗದಲ್ಲಿರುವ ಅಲ್ ಇಕ್ರಾ ಶಾಲೆ, ಕುಂದುವಾಡ ರಸ್ತೆಯಲ್ಲಿರುವ ಸಪ್ತಗಿರಿ ಶಾಲೆ ಹಾಗೂ ನಿಟುವಳ್ಳಿಯಲ್ಲಿನ ಎಸ್.ವಿ.ಎಸ್. ಶಾಲೆಗಳನ್ನು ಮೀಸಲು ಕೇಂದ್ರಗಳನ್ನಾಗಿ ಮಾಡಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ಕಂಡು ಬಂದರೆ ಈ ಮೀಸಲು ಕೇಂದ್ರಗಳನ್ನು ಉಪಯೋಗಿಸಿಕೊಳ್ಳಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಆದರೆ ಪ್ರಾಣಕ್ಕಿಂತ ದೊಡ್ಡದಲ್ಲ ಎಂಬುದು ಕೆಲವರ ವಾದ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‌ಡೌನ್ ಸಡಿಲಿಕೆ ಮಾಡಿವೆ. ಕೊರೊನಾ ಸೋಂಕಿಗೆ ಸಂಬಂಧಿಸಿ ದಂತೆ ಚಿಕಿತ್ಸೆ ಹಾಗೂ ಕ್ವಾರಂಟೈನ್ ಕ್ರಮಗಳಲ್ಲೂ ಬದಲಾವಣೆಗಳಾಗಿವೆ. ಆದರೆ ಸೋಂಕು ಮಾತ್ರ ಹೆಚ್ಚುತ್ತಲೇ ಇದೆ. ತಜ್ಞರ ಪ್ರಕಾರ ಜೂನ್ ಅಂತ್ಯದಲ್ಲಿ ಕೊರೊನಾ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯ ತೆಯೂ ಇದೆ. ಈ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಎಷ್ಟು ಸೂಕ್ತ ಎಂಬುದು ಪೋಷಕರೊಬ್ಬರ ಪ್ರಶ್ನೆ.
ಇನ್ನು ಪರೀಕ್ಷೆ ನಡೆಸಬೇಕಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರತಿ ಕೊಠಡಿಯಲ್ಲಿ ಕೂರುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಆಗ ಹೆಚ್ಚುವರಿ ಕೊಠಡಿಗಳು ಬೇಕು. ಹೆಚ್ಚುವರಿ ಮೇಲ್ವಿಚಾರಕರು ಬೇಕು. ಮಕ್ಕಳು, ಮೇಲ್ವಿಚಾರಕರಿಗೆ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಬೇಕು. ಇಷ್ಟೇ ಅಲ್ಲ, ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ತಲುಪಿಸುವ ವ್ಯವಸ್ಥೆಯೂ ಕಷ್ಟವಾಗಬಹುದು. ಅದಕ್ಕಾಗಿ ಹೆಚ್ಚುವರಿ ಸಿಬ್ಬಂದಿಗಳ ಅಗತ್ಯವೂ ಇದೆ ಎನ್ನುತ್ತಾರೆ ಶಿಕ್ಷಕರೊಬ್ಬರು.
ಪರೀಕ್ಷಾ ಕೇಂದ್ರಗಳ ಬದಲಾವಣೆ ಸಮಸ್ಯೆ: ಪರೀಕ್ಷೆಗಳಲ್ಲಿ ಅಕ್ರಮ ನಡೆಯದಂತೆ ತಪ್ಪಿಸಲು ಪರೀಕ್ಷಾ ಕೇಂದ್ರಗಳನ್ನು ಬದಲಿಸಲಾಗುತ್ತಿತ್ತು. ಒಂದು ಶಾಲೆಯ ಮಕ್ಕಳು ಮತ್ತೊಂದು ಶಾಲೆಯ ಪರಿಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆಯುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಕೊರೊನಾ ಕಾಲದಲ್ಲಿ ಪರೀಕ್ಷಾ ಕೇಂದ್ರಗಳನ್ನು ಬದಲಿಸ ದಿರುವುದೇ ಸೂಕ್ತ ಎಂದು ಹಲವರು ಅಭಿಪ್ರಾಯಿಸಿದ್ದಾರೆ. ತಮ್ಮ ಮಕ್ಕಳು ತಾವು ಕಲಿಯುವ ಶಾಲೆ ಬಿಟ್ಟು ಬೇರೆ ಯಾವುದೋ ಪ್ರದೇಶದಲ್ಲಿರುವ ಶಾಲೆಗೆ ತೆರಳಿ ಪರೀಕ್ಷೆ ಬರೆಯುವುದು ಪೋಷಕರಿಗೆ ಇಷ್ಟವಾಗುತ್ತಿಲ್ಲ. ಅಲ್ಲಿಗೆ ಬರುವ ಮಕ್ಕಳು ಯಾವ ಯಾವ ಪ್ರದೇಶಗಳಿಂದ ಬರುತ್ತಾರೋ ಎಂಬ ಭಯ ಪೋಷಕರಲ್ಲಿದೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಅಜ್ಜಣ್ಣ, ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವುದು ಅಗತ್ಯವೇ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ದೂರದ ಬೇರೊಂದು ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಾರೆ. ಆದ್ದರಿಂದ ಇಲಾಖೆಯು ಈ ವರ್ಷ ಕೇಂದ್ರಗಳ ಬದಲಾವಣೆ ಪದ್ಧತಿ ಬಿಟ್ಟು ಆಯಾ ಕೇಂದ್ರಗಳಲ್ಲಿಯೇ ಸಮೀಪದ ಮಕ್ಕಳಿಗೆ ಪರೀಕ್ಷೆ ನಡೆಸಲು ಅನುವು ಮಾಡಿಕೊಡುವುದು ಸೂಕ್ತ ಎಂದು ಅಭಿಪ್ರಾಯಿಸಿದರು.
ಒಚ್ಚಾಪೆ ಬೇಕು-ಬೇಡಗಳ ನಡುವೆಯೇ ಪರೀಕ್ಷೆಗೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಇಲಾಖೆ ತಯಾರಾಗಿದ್ದು, ಪರೀಕ್ಷಾ ಕೇಂದ್ರಗಳ ಸ್ಪಷ್ಟ ಚಿತ್ರಣ ಮುಂದಿನ ದಿನಗಳಲ್ಲಿ ಸಿಗಲಿದೆ.