ಹರಪನಹಳ್ಳಿಯಲ್ಲಿ ಅನಧಿಕೃತ ಕಟ್ಟಡ, ಶೆಡ್‍ಗಳ ತೆರವು

ಹರಪನಹಳ್ಳಿ, ಮೇ 28- ಪಟ್ಟಣದ ಹಿರೇಕೆರೆ ವೃತ್ತದ ಬಳಿ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಅನಧಿಕೃತವಾಗಿ ತಲೆಎತ್ತಿದ್ದ ಕಟ್ಟಡಗಳು ಹಾಗೂ ಶೆಡ್‍ಗಳ ತೆರವು ಕಾರ್ಯಾಚರಣೆ ಪುರಸಭೆ ವತಿಯಿಂದ ಜರುಗಿತು. 

ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ 2.5 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಪಟ್ಟಣದ ಹೊಸಪೇಟೆ – ಶಿವಮೊಗ್ಗ ರಾಜ್ಯ ಹೆದ್ದಾರಿಯ ಅಗಲೀಕರಣ ಕಾಮಗಾರಿಗೆ ಅಡಚಣೆಯನ್ನುಂಟು ಮಾಡಿದ್ದ ಹಿರೇಕೆರೆ ವೃತ್ತದ ಸುತ್ತಮುತ್ತಲಿನ ರಸ್ತೆಯ ಇಕ್ಕೆಲದಲ್ಲಿರುವ ಅನಧಿಕೃತ ಕಟ್ಟಡ ಹಾಗೂ ಶೆಡ್‍ಗಳನ್ನು ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್ ನಿರ್ದೇಶನದಂತೆ ಪೊಲೀಸ್‌ ಇಲಾಖೆಯ ಸಹಕಾರದೊಂದಿಗೆ ಈ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಆರ್.ನಾಗರಾಜ್ ನಾಯ್ಕ್ ತಿಳಿಸಿದ್ದಾರೆ.

ಹರಪನಹಳ್ಳಿ ತಾಲ್ಲೂಕು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಹರಪನಹಳ್ಳಿ ಪಟ್ಟಣದ ಹೊಸಪೇಟೆಯಿಂದ ಶಿವಮೊಗ್ಗ ರಾಜ್ಯ ಹೆದ್ದಾರಿ 25ರ ರಸ್ತೆ ಸರಪಳಿ 77.8 ರಿಂದ 79.00ರ ವರೆಗೆ ಹಾದು ಹೋಗುವ ಈ ಪ್ರದೇಶ ಅಪಘಾತ  ವಲಯವೆಂದು ಗುರುತಿಸಲಾಗಿದ್ದು,  ಲೋಕೋಪಯೋಗಿ ಇಲಾಖೆಯ ಮನವಿಯ ಮೇರೆಗೆ ತಾಲ್ಲೂಕು ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್‌ ಅವರು ಈ ಕುರಿತು ಸಭೆ ನಡೆಸಿದ ಬಳಿಕ ಅವರ ನಿರ್ದೇಶನದಂತೆ ಪೊಲೀಸ್‌ ಇಲಾಖೆಯ ಸಹಯೋಗದೊಂದಿಗೆ ಈ ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದರು.

ರಾಜ್ಯ ಹೆದ್ದಾರಿ ಹಾದು ಹೋಗುವ ರಸ್ತೆಯ ಮಧ್ಯ ಭಾಗದಿಂದ 21.5 ಮೀಟರ್‍ನ ವಿಸ್ತೀರ್ಣದಲ್ಲಿ ರಸ್ತೆಗಳಿರಬೇಕು. ಆದರೆ ಹಿರೇಕೆರೆ ವೃತ್ತದಲಿ ಅಷ್ಟು ಮೀಟರ್‌ ಅಂತರ ಇರಲಿಲ್ಲ.  ಅಲ್ಲದೇ ರಸ್ತೆ ಒತ್ತುವರಿ ಮಾಡಿ ಅನಧಿಕೃತವಾಗಿ ಕಟ್ಟಡ ಹಾಗೂ ಶೆಡ್‍ಗಳನ್ನು ನಿರ್ಮಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ನಾವು ಕಟ್ಟಡ ಹಾಗೂ ಶೆಡ್‍ಗಳ ಮಾಲೀಕರಿಗೆ ತೆರವು ಗೊಳಿಸುವಂತೆ ಅವರಿಗೆ ಅನೇಕ ಬಾರಿ ಮೌಖಿಕವಾಗಿ ತಿಳಿಸಿದ್ದರೂ ಸಹ ಮಾಲೀಕರು ತೆರವುಗೊಳಿಸದ ಕಾರಣ ಪೊಲೀಸ್‌ ಇಲಾಖೆಯ ಸಹಯೋಗ ದೊಂದಿಗೆ ಈ ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದರು.

ಕಾರ್ಯಾಚರಣೆ ನಡೆಯುವ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಡಿವೈಎಸ್ಪಿ ಮಲ್ಲೇಶ್‌ ದೊಡ್ಮನಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಕೆ.ಕುಮಾರ್‌ ಅವರ ನೇತೃತ್ವದಲ್ಲಿ ಹರಪನಹಳ್ಳಿ ಪಿಎಸ್‍ಐ ಸಿ.ಪ್ರಕಾಶ್, ಹಲುವಾಗಲು ಪಿಎಸ್‍ಐ ಟಿ.ಎನ್. ಕೃಷ್ಣಪ್ಪ, ಅರಸೀಕೆರೆ ಪಿಎಸ್‍ಐ ಕಿರಣ್‍ಕುಮಾರ್, ಚಿಗಟೇರಿ ಪಿಎಸ್‍ಐ ಇಷಾಕ್‍ರನ್ನೊಳಗೊಂಡ ತಂಡ ಗಳು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಿ ಬಿಗಿ ಬಂದೋಬಸ್ತ್‍ನಿಂದ ಅನಧಿಕೃತವಾಗಿ ತಲೆ ಎತ್ತಿದ್ದ ಕಟ್ಟಡಗಳು ಹಾಗೂ ಶೆಡ್‍ಗಳ ತೆರವು ಕಾರ್ಯಾಚರಣೆ ನಡೆಯಿತು.

error: Content is protected !!